ರಾಯಚೂರು ಜಿಲ್ಲೆಯ 86 ಮಂದಿ ಸಫಾಯಿ ಕರ್ಮಚಾರಿ ಫಲಾನುಭವಿಗಳಿಗೆ ಎಂಎಸ್‌ಐಡಿ ಗುರುತಿನ ಚೀಟಿ ನೀಡಲಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೂಚನೆ ನೀಡಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆಯಡಿ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ರಚನೆಯಾಗಿದೆ. ಆ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಸಭೆಯಲ್ಲಿ ಅವರು ಮಾತನಾಡಿದರು. “ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ 86 ಮಂದಿಗೆ ಎಂಎಸ್‌ಐಡಿ ಗುರುತಿನ ಚೀಟಿ ನೀಡಲು ಆದೇಶಿಸಿದೆ” ಎಂದರು.
“ಸಫಾಯಿ ಕರ್ಮಚಾರಿಗಳ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ, ನಗರಸಭೆ, ಶಾಸಕರ ನಿಧಿ, ವಿಧಾನ ಪರಿಷತ್ ನಿಧಿ ಸೇರಿದಂತೆ ಒಟ್ಟು 17.16 ಲಕ್ಷ ರೂ. ಬಿಡುಗಡೆಯಾಗಿದೆ. ಸಮುದಾಯ ಭವನ ನಿರ್ಮಾಣ ಕಾಮಗಾಗರಿ ಅರ್ಧಕ್ಕೆ ನಿಂತಿದೆ. ಉಳಿದ ಕಾಮಗಾರಿ ಪೂರ್ಣಣಕ್ಕೆ ನಗರಸಭೆಯಿಂದ 5 ಲಕ್ಷ ಮತ್ತು ಶಾಸಕರ ನಿಧಿಯಿಂದ 5 ಲಕ್ಷ ಒಟ್ಟು 10 ಲಕ್ಷ ರೂ.ನಲ್ಲಿ ಸಮುದಾಯ ಭವನ ಕಾಮಗಾರಿ ಪೂರ್ಣಕ್ಕೆ ಶಾಸಕರಿಗೆ ತಿಳಿಸಲಾಗುವುದು” ಎಂದರು.
“ಸಿಯಾತಲಾಬ್ ಬಡಾವಣೆಯಲ್ಲಿ 10 ತೆರೆದ ಗುಂಡಿಗಳಿದ್ದು, ಅವುಗಳನ್ನು ಮುಚ್ಚಲು ಈಗಾಗಲೇ ನಗರಸಭೆಗೆ ಸೂಚಿಸಲಾಗಿದೆ. ಒಂದು ವಾರದೊಳಗೆ ತೆರೆದ ಗುಂಡಿಗಳನ್ನು ಮುಚ್ಚಬೇಕು” ಎಂದು ಸೂಚಿಸಿದರು.
ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದು 86 ಕುಟುಂಬಗಳಿಗೆ ಯಾವುದೇ ಮನೆಗಳಿಲ್ಲ. ಸರ್ವೆ ನಂ. 209ರಲ್ಲಿ ಏಗನೂರು ಟೆಂಪಲ್ ಹತ್ತಿರ 6 ಎಕರೆ ಸರ್ಕಾರಿ ಭೂಮಿ ಇದ್ದು, 2 ಎಕರೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಮನೆ ನೀಡಲು ಅನುಮೋದನೆ ನೀಡಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಶೈಕ್ಷಣಿಕ ಸೌಲಭ್ಯಕ್ಕಾಗಿ ಶೇ.24.10, ಎಸ್‌ಸಿಪಿ, ಟಿಎಸ್‌ಪಿ ಅನುದಾನ ಶೇ.20ರಷ್ಟು ಮೀಸಲಿಟ್ಟು ವಿದ್ಯಾರ್ಥಿ ವೇತನ ಒದಗಿಸಬೇಕು. ಸಫಾಯಿ ಕರ್ಮಚಾರಿಗಳಿಗಾಗಿ ನಿಗದಿಪಡಿಸಿದ ಸ್ಮಶಾನ ಭೂಮಿ ಒತ್ತುವರಿಯಾಗಿದ್ದು, ತೆರವುಗೊಳಿಸಲಾಗಿದೆ. ಸ್ಮಶಾನ ಭೂಮಿ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮನರೇಗಾ ಯೋಜನೆ ಅನುಷ್ಠಾನ; ಗದಗ ಜಿಲ್ಲಾ ಪಂಚಾಯತಿಗೆ ಎರಡನೇ ಸ್ಥಾನ
ಈ ವೇಳೆ ಸಫಾಯಿ ಕರ್ಮಚಾರಿಗಳಿಗೆ ಎಂಎಸ್‌ಐಡಿ ಕಾರ್ಡ್ ವಿತರಣೆ ಮಾಡಲಾಯಿತು.
ಜಿ.ಪಂ. ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಂದ್ರ ಜಲ್ದಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು