ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದ್ದು, ಭಾವೈಕ್ಯದ ಪ್ರತೀಕವಾಗಿದೆ. ರಾಯಚೂರು ಜಿಲ್ಲೆ ಮುದಗಲ್ ಪಟ್ಟಣ ಹಾಗೂ ಗುರುಗುಂಟ ಗ್ರಾಮದಲ್ಲಿ ನಡೆಯುವ ಆಚರಣೆ ವೀಕ್ಷಣೆಗೆ ರಾಜ್ಯ ಹಾಗೂ ನೆರೆರಾಜ್ಯಗಳ ಸಹಸ್ರಾರು ಭಕ್ತರು ಸೇರಿದ್ದು, ವಿಶೇಷವಾಗಿದೆ.
ಕೋಟೆಯೊಳಗಿನ ದರ್ಗಾ ಬಳಿ ಪೀರ್‌ಗಳ ಸವಾರಿ ವೈಭವದಿಂದ ನಡೆಯುತ್ತದೆ. ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ದರ್ಗಾದ ಮುಂದಿರುವ ಅಲಾವಿ ಕುಣಿತದ ಮುಂದೆ ಯುವಕರು ಹೆಜ್ಜೆ ಹಾಕುತ್ತಾರೆ. ಕರ್‌ಬಲಾ ಕಾಳಗ ಯುದ್ಧದ ಘೋರ ವರ್ಣನೆ, ಅನ್ಯಾಯ, ವಂಚನೆ, ಸಾವು-ನೋವು, ಶೌರ್ಯ-ಬಲಿದಾನಗಳ ಕಥನವನ್ನು ಹಾಡುಗಾರರು ಹಾಡಿ ವರ್ಣಿಸುತ್ತಾರೆ.
ಸಿಂಗಾರ: ಮೊಹರಂ ಅಂಗವಾಗಿ ಪಟ್ಟಣದ ಹಿಂದೂ-ಮುಸ್ಲಿಂ ಸಮುದಾಯದವರು ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿ ಹಬ್ಬ ಆಚರಿಸುತ್ತಾರೆ. ಹರಕೆ ಹೊತ್ತವರು ಆಲಂಗಳಿಗೆ ಮುಡಿಪು ಅರ್ಪಿಸುತ್ತಾರೆ. ಮುದಗಲ್‌ನ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣದ ಕೋಟೆ ಹೊರಭಾಗದಲ್ಲಿ ನಡೆಯುವ ಹಸನ್-ಹುಸೇನ್ ಸಹೋದರರ ಬೆಳ್ಳಿ ಪಂಜಾಗಳ ಮುಖಾಮುಖಿ ದೃಶ್ಯ ಕಣ್ತುಂಬಿಕೊಳ್ಳಲು ದೇಶ-ವಿದೇಶದ ಜನರು ಆಗಮಿಸುತ್ತಾರೆ. ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ.
ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರುಗುಂಟ ಗ್ರಾಮದಲ್ಲಿಯೂ ಕೂಡ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಮೊಹರಂ 7 ನೇ ದಿವಸ ಹುಸೇನ ಆಲಂ ದರ್ಗಾದಿಂದ ಸೈದಖಾಸಿಂ ದರ್ಗಾವರಗೆ ಒಂದು ಎತ್ತು ಕಟ್ಟಿಗೆಯಿಂದ ತುಂಬಿದ 30 ಎತ್ತಿನ ಬಂಡಿಗಳನ್ನು ಎಳೆಯುತ್ತದೆ . ಹಾಗೆಯೇ ಕಟ್ಟಿಗೆಗಳನ್ನು ಸೈದಖಾಸಿಂ ದರ್ಗಾದ ಮುಂದೆ ಹವಾಲಾದಲ್ಲಿ ಹಾಕಿ ಇಡಿ ರಾತ್ರಿ ಸುಡುತ್ತಾರೆ. ಮರುದಿನ ಅಂದರೆ ಮೊಹರಂ 08 ನೇ ದಿನ ಬೆಳಗಿನ ಜಾವ ಆಲಾಯೆ ದೇವರು ಬೆಂಕಿಯನ್ನು ತುಳಿಯುವುದನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಸೇರುತ್ತಾರೆ.
ಇದನ್ನೂ ಓದಿದ್ದೀರಾ? ಗುಲ್ಬರ್ಗಾ ವಿವಿ | ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸದ ಆಡಳಿತ
ದುಡಿಯಲು ವಲಸೆ ಹೋದವರೂ ಕೂಡ ವರ್ಷಕ್ಕೆ ಒಂದು ಬಾರಿ ಮೊಹರಂ ಹಬ್ಬಕ್ಕೆ ತಮ್ಮ ತಮ್ಮ ಊರಿಗೆ ಮರಳುತ್ತಾರೆ. ಮೊಹರಂ ಕೊನೆಯ ಎರಡು ದಿನಗಳು ಮುಸ್ಲಿಂ ಸಮುದಾಯದವರು ರಂಝಾನ್ ಹಬ್ಬದಂತೆ ಉಪವಾಸ ಇರುತ್ತಾರೆ.
ಸತತ 10 ದಿನಗಳ ಕಾಲ ಆಚರಿಸುವ ಮೊಹರಂನಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 9ನೇ ದಿನ ಹಸನ್-ಹುಸೇನ್ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿಯಾಗಿರುತ್ತದೆ.