ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಶವಸಂಸ್ಕಾರಕ್ಕೆ ಸಮಸ್ಯೆಯಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ದಲಿತ ಸೇನೆಯ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶವ ಸಂಸ್ಕಾರಕ್ಕೆ ಸಮಸ್ಯೆಯಾಗಿದ್ದು ನಿಗದಿಯಾಗಿರುವ ಸ್ಥಳ ಕೇವಲ ದಾಖಲೆಗಳಲ್ಲಿ ಮಾತ್ರ ಸೀಮಿತವಾಗಿದೆ. ಇಂದಿಗೂ ಕೂಡ ಗ್ರಾಮಸ್ಥರು ತುಂಗಭದ್ರಾ ನದಿಯನ್ನು ದಾಟಿ ಶವಸಂಸ್ಕಾರ ಮಾಡುವ ದಾರುಣ ಪರಿಸ್ಥಿತಿಯೊಳಗಿದ್ದಾರೆ. ನದಿಯ ಪ್ರವಾಹದ ವೇಳೆಯಲ್ಲಿ ಇದು ಜೀವಪಣಕ್ಕಿಟ್ಟು ನಡೆಯುವ ಶವಸಂಸ್ಕಾರವಾಗಿ ಮಾರ್ಪಡುತ್ತಿದೆ.
ಡಿಜಿಟಲ್ ಯುಗ, ಸುಧಾರಿತ ಕರ್ನಾಟಕದ ಘೋಷಣೆಗಳನ್ನು ನಂಬಿ ನಿರೀಕ್ಷೆಯಲ್ಲಿ ಇರುವ ಈ ಗ್ರಾಮಸ್ಥರು ಇಂದು ಸಹ ಅಮಾನವೀಯ ಪರಿಸ್ಥಿತಿಯಲ್ಲಿ ಮೃತರ ಅಂತಿಮ ಸಂಸ್ಕಾರ ಮಾಡುತ್ತಿದ್ದಾರೆ. ಇದು ಆಡಳಿತದ ನಿರ್ಲಕ್ಷ್ಯವೇ? ಅಥವಾ ಪ್ರಭಾವಿಗಳ ಅಕ್ರಮದ ಪರಿಣಾಮವೇ ಎಂದು ಪ್ರಶ್ನಿಸಿದರು.
ಗ್ರಾಮಕ್ಕೆ ಶವಸಂಸ್ಕಾರಕ್ಕೆ ಸೂಕ್ತ ಸ್ಥಳ, ರಸ್ತೆ ಸಂಪರ್ಕ, ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂಬ ಬೇಡಿಕೆ ವರ್ಷಗಳಿಂದ ಅಲಕ್ಷ್ಯವಾಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಕಾನೂನು ಬದ್ಧವಾಗಿ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಮಾನವೀಯ ಸೌಲಭ್ಯ ಒದಗಿಸುವುದು ಅತಿ ಅಗತ್ಯವಾಗಿದೆ
ಮುಕುಂದಾ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ನಿಗದಿತ ಜಾಗವನ್ನು ನಿಖರವಾಗಿ ಗಡಿ ಗುರುತಿಸಿ ಭೌತಿಕವಾಗಿ ಹಸ್ತಾಂತರಿಸಬೇಕು. ಶವಸಂಸ್ಕಾರ ಸ್ಥಳಕ್ಕೆ ರಸ್ತೆ ಸಂಪರ್ಕ, ಶೆಡ್, ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ನದಿಯ ಪ್ರವಾಹದ ಸಂದರ್ಭದಲ್ಲಿ ಶವ ಸಾಗಣೆ ಇತ್ಯಾದಿ ಅವ್ಯವಹಾರ ತಪ್ಪಿಸಲು ತಾತ್ಕಾಲಿಕ ಬೋಟು ಪರವಾನಗಿ ನೀಡುವುದು ಅಥವಾ ಸೇತುವೆ ನಿರ್ಮಾಣದ ಪ್ರಸ್ತಾವನೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರೀತಿ ವಿಚಾರದಲ್ಲಿ ಯುವಕನ ಹತ್ಯೆ ಖಂಡಿಸಿ – ಸಾಲಿಡಾರಿಟಿ ಪ್ರತಿಭಟನೆ
ಈ ವೇಳೆ ಸುರೇಶ್ ಬಾಬು, ಬಾಬಾಬಾವುದ್ದೀನ್ ,ಬಾಬುರಾವ್, ತಾಜುದ್ದೀನ್ , ರಾಜಸಾಬ್ , ಶಾಂತಕುಮಾರ್ ಕುರುಡಿ, ದಲಿತ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವಿದ್ ಖಾನ್, ದಲಿತ ಸೇನೆ ಜಿಲ್ಲಾಧ್ಯಕ್ಷರು ಮಾರುತಿ ಚಿಕ್ಕ ಸ್ಕೋರ್, ಅನೇಕ ಕಾರ್ಯಕರ್ತರು ಸಮಾಜ ಮುಖಂಡರು ಉಪಸ್ಥಿತರಿದ್ದರು