‘ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಮುಂದಾದರು’ ಎಂಬ ಗಾದೆ ಮಾತಿನಂತೆ ಬೀದಿ ನಾಯಿಗಳ ದಾಳಿಗೆ ಯುವತಿ ಮೃತಪಟ್ಟ ನಂತರ ನಗರಸಭೆಯು ಎಚ್ಚೆತ್ತುಕೊಂಡಿದ್ದು, ನಾಯಿಗಳನ್ನು ಸೆರೆ ಹಿಡಿಯಲು ಮುಂದಾಗಿದೆ.
ನಗರದ ಮಡ್ಡಿಪೇಟೆಯಲ್ಲಿ ಮಹಾದೇವಿ (20) ಎಂಬ ಯುವತಿ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದಾರೆ. ನಗರಸಭೆಗೆ ಬೀದಿ ನಾಯಿಗಳ, ಬೀಡಾಡಿ ದನಗಳ ಬಗ್ಗೆ ಹಲವು ಬಾರಿ ಗಮನಕ್ಕೆ ತರಲಾಗಿದೆಯಾದರೂ ನಿರ್ಲಕ್ಷ್ಯದ ಕಾರಣದಿಂದ ಯುವತಿ ಸಾವನ್ನಪ್ಪಿದ್ದಾರೆ. ಆ ಬಳಿಕ ಎಚ್ಚೆತ್ತುಕೊಂಡಿರುವ ನಗರಸಭೆ, ದುರ್ಘಟನೆ ಸಂಭವಿಸಿದರೆ ಮಾತ್ರ ಕೆಲಸ ನಿರ್ವಹಿಸುತ್ತಾರೆ ಎಂದು ಕಾಣುತ್ತಿದೆ ಎಂದು ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಸಹ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದವು. ದಾಳಿ ಬಳಿಕ ಎಚ್ಚೆತ್ತುಕೊಂಡು ನಾಯಿಗಳ ಸೆರೆ ಹಿಡಿಯಲಾಗಿತ್ತು. ದಾಳಿ ಮಾಡಿದ ಬಳಿಕ ನಗರಸಭೆ ಎಚ್ಚರಿಕೆ ವಹಿಸುತ್ತಿದೆ ವಿನಃ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸೂಕ್ತ ಪರಿಹಾರದ ಭರವಸೆ ನೀಡಿದ ಜಿಲ್ಲಾಧಿಕಾರಿ
ಬೀದಿ ನಾಯಿಗಳ ದಾಳಿಯಿಂದ ಬಲಿಯಾದ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಎಲ್ಲ ಶಾಸಕರ ಮನೆ ಮುಂದೆ ಡಿ.14ರಂದು ತಮಟೆ ಚಳವಳಿ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೀದಿ ನಾಯಿಗಳ ಹಾವಳಿಗೆ ಯುವತಿ ಬಲಿಯಾದ ವಿಷಯ ತಿಳಿದು ಬಂದಿದೆ. ತಕ್ಷಣ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಯುವತಿ ಕುಟುಂಬಕ್ಕೆ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಹಿಂದೆಯೂ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದಾಗ ಕಾರ್ಯಾಚರಣೆ ನಡೆಸಿ ಬೇರೆ ಕಡೆ ಸಾಗಿಸಲಾಗಿತ್ತು. ನಿಯಂತ್ರಿಸುವಲ್ಲಿ ನಡೆಸಿದ ಕಾರ್ಯಾಚರಣೆ ಪರಿಣಾಮಕಾರಿಯಾಗಿಲ್ಲ ಎನ್ನುವ ದೂರುಗಳು ಬಂದಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲಿಯೇ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದರು.
