ಬಡವರು, ಕೂಲಿಕಾರ್ಮಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಹಸಿವು ನೀಗಿಸುತ್ತಿವೆ ‘ಇಂದಿರಾ ಕ್ಯಾಂಟೀನ್’ಗಳು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಹತ್ವ ಪಡೆದಿರುವ ಇಂದಿರಾ ಕ್ಯಾಂಟಿನ್‌ಗಳು ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ತೆರೆಯಲ್ಪಟ್ಟಿವೆ. ಅಂತೆಯೇ ರಾಯಚೂರು ಜಿಲ್ಲೆಯಲ್ಲಿ ಆರು ಇಂದಿರಾ ಕ್ಯಾಂಟೀನ್‌ಗಳಿವೆ. ಆದರೆ, ಮಸ್ಕಿ ತಾಲೂಕಿನಲ್ಲಿ ಮಾತ್ರ ಈ ಕ್ಯಾಂಟಿನ್ ತೆರೆಯಲಾಗಿಲ್ಲ. ಮಸ್ಕಿಯಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಜಿಲ್ಲೆಯ 07 ತಾಲೂಕುಗಳ ಪೈಕಿ ರಾಯಚೂರು, ಮಾನ್ವಿ , ದೇವದುರ್ಗ, ಲಿಂಗಸಗೂರು, ಸಿಂಧನೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸೇವೆ ಒದಗಿಸುತ್ತಿವೆ. ಆದರೆ, ಮಸ್ಕಿಗೆ ಈ ಸೇವೆ ದೊರೆತಿಲ್ಲ. ಮಸ್ಕಿ ತಾಲೂಕು ಕೇಂದ್ರವಾಗಿ ಸುಮಾರು 06 ವರ್ಷಗಳು ಕಳೆದರೂ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ದೇವನಾಂಪ್ರಿಯ ಅಶೋಕನ ನಾಡು ಎಂದು ಪ್ರಸಿದ್ಧವಾಗಿರುವ ಮಸ್ಕಿಯಲ್ಲಿ ಇಂದಿರಾ ಕ್ಯಾಂಟೀನ್ ಮಾತ್ರವಲ್ಲದೆ ಹಲವಾರು ಮೂಲಭೂತ ಸೌಕರ್ಯಗಳೂ ಮರೀಚಿಕೆಯಾಗಿವೆ.
ಈದಿನ.ಕಾಮ್ ಜೊತೆ ಮಾತನಾಡಿದ ವಿಧ್ಯಾರ್ಥಿ ಮೌನೇಶ್ ತುಗ್ಗಿನಹಳ್ಳಿ, “ವಿಧ್ಯಾರ್ಥಿಗಳು ಬೇರೆ ಬೇರೆ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿ ಮಸ್ಕಿಗೆ ಬರುತ್ತಾರೆ. ಬೆಳಿಗ್ಗೆ ಕಾಲೇಜು ಇರುವುದರಿಂದ ಹಲವು ವಿದ್ಯಾರ್ಥಿಗಳು ಉಪಹಾರ ಸೇವಿಸಿ ಬರಲಾಗುವುದಿಲ್ಲ. ಹೋಟೆಲ್‌ಗಳಲ್ಲಿ ಟಿಫಿನ್ ತಿನ್ನಬೇಕೆಂದರೆ 50/70 ರೂ.ವರೆಗೂ ಖರ್ಚಾಗುತ್ತದೆ. ಹಾಗೆ ಕಾಲೇಜು ಮುಗಿಸಿಕೊಂಡು ಹೋಗ ಬೇಕಾದರೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರಲ್ಲ. ಮಧ್ಯಾಹ್ನ ಊಟ ಕೂಡ ಮಾಡೋಣ ಅಂದ್ರೆ 80/100 ರೂ. ಆಗುತ್ತೆ. ಅಷ್ಟು ಹಣ ಭರಸಲಾಗಿದೆ ಹಲವರು ಉಪವಾಸವಿದ್ದು, ಮನೆಗೆ ಹೋಗಿ ಊಟ ಮಾಡಬೇಕಾಗಿದೆ. ಇಂದಿರಾ ಕ್ಯಾಂಟೀನ್ ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ, ಬಡ ಜನರು, ಕೂಲಿ ಕಾರ್ಮಿಕರಿಗೂ ಉಪಯುಕ್ತ” ಎಂದಿದ್ದಾರೆ.
ಪಿಯುಸಿ ವಿದ್ಯಾರ್ಥಿ ರೇಣುಕಾ ಮಾತನಾಡಿ, “ಕಾಲೇಜು 7:30ಕ್ಕೆ ಪ್ರಾರಂಭವಾಗುತ್ತದೆ. ನಾವು ಊರಿನಿಂದ ಊಟ ಮಾಡದೇ ಬರುತ್ತೇವೆ. ಇಲ್ಲಿ ಮಾಡಬೇಕು ಅಂದ್ರೆ 100/200 ಖರ್ಚಾಗುತ್ತದೆ. ವಿಧ್ಯಾರ್ಥಿಗಳ ಬಳಿ ಅಷ್ಟು ದುಡ್ಡು ಇರಲ್ಲ. ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ಖರ್ಚಿನಲ್ಲಿ ಹೊಟ್ಟೆ ತುಂಬಾ ಊಟ ಮಾಡಬಹುದು. ಶೀಘ್ರವಾಗಿ ಮಸ್ಕಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರ ಸಹಾಯಕ ಮಾತನಾಡಿ ಇಂದಿರಾ ಕ್ಯಾಂಟೀನ್ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಇದನ್ನು ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ.