ಹಿಂದಿನ ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರವೂ ಕೂಡ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದೇ ಅನ್ಯಾಯ ಮಾಡುತ್ತಿರುವುದನ್ನು ಅನ್ಯಾಯ ಖಂಡಿಸಿ 15 ದಿನಗಳ ನಂತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಪ್ಪ ಗಿರಣಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಜಿಲ್ಲೆಯಲ್ಲಿ ಸರಿ ಸುಮಾರು ₹300 ಕೋಟಿಯಿಂದ ₹500 ಕೋಟಿಯಷ್ಟು ಬಾಕಿ ಹಣವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಬೇಕು. ಆದರೆ ರಾಜ್ಯದ ಮುಖ್ಯಮಂತ್ರಿಯವರು ಬಾಕಿಬಿಲ್ ಪಾವತಿಸುವಂತೆ ಸೂಚಿಸಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಧಿಕೃತ ಆದೇಶ ನೀಡದ ಹೊರತು ಬಿಲ್ ಪಾವತಿಸುವುದಿಲ್ಲವೆಂದು ಹೇಳುತ್ತಿದ್ದಾರೆ. ಸಾಲ ಮಾಡಿ ಗುತ್ತಿಗೆ ಕೆಲಸ ಮಾಡುವ ಗುತ್ತಿಗೆದಾರರನ್ನು ಎಲ್ಲ ಸರ್ಕಾರಗಳು ಸಾಲಗಾರರನ್ನಾಗಿಸಿವೆ. ಕೆಕೆಆರ್‌ಡಿಬಿ ಒಂದರಲ್ಲಿಯೇ ₹1,957 ಕೋಟಿ ಬಾಕಿಯಿದೆ. ರಾಜ್ಯಾದ್ಯಂತ 47 ಸಾವಿರ ಕೋಟಿ ರೂ. ಬಾಕಿಯಿದೆ. ಹಿಂದಿನ ಬಿಜೆಪಿ ಸರ್ಕಾರವೂ ಗುತ್ತಿಗೆದಾರರರಿಗೆ ಬಾಕಿ ಹಣ ನೀಡದೇ ನಿರ್ಲಕ್ಷವಹಿಸಿತ್ತು” ಎಂದು ಆರೋಪಿಸಿದರು.
“ಕಾಂಗ್ರೆಸ್ ಸರ್ಕಾರ ಬಿಟ್ಟಿ ಯೋಜನೆಗಳನ್ನು ರೂಪಿಸಿ ಜಾರಿಯಲ್ಲಿ ತೊಡಗಿದೆ. ಹಣಹಾಕಿ ಮಾಡಿದ ಗುತ್ತಿಗೆದಾರರನ್ನು ಕಡೆಗಣಿಸಿದೆ” ಎಂದರು.
“ಬೆಂಗಳೂರಿನಲ್ಲಿ ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಹಣ ನೀಡದೇ ಇರುವುರಿಂದ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರವೇ ಹೊಣೆಯಾಗಿದೆ. ಉಪ ಮುಖ್ಯಮಂತ್ರಿ ಡಿ ಕೆ ಶಿವುಕುಮಾರ್ ಅವರು ಗುತ್ತಿಗೆದಾರರ ಕುರಿತು ಅಹಂಕಾರವಾಗಿ ಮಾತನಾಡಿರುವುದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಆಟೋ ಚಾಲಕರ ನಿಗಮ ಮಂಡಳಿ ರಚನೆಗೆ ಒತ್ತಾಯ
ಎಲ್ಲ ಶಾಸಕರು ಗುತ್ತಿಗೆದಾರರಾಗಿಯೇ ಶಾಸಕರು, ಸಚಿವರುಗಳಾಗಿದ್ದಾರೆ. ಗುತ್ತಿಗೆದಾರರ ಸಮಸ್ಯೆ ಏನು ಎಂದು ಗೊತ್ತಿದ್ದರೂ ಬಿಲ್ ಪಾವತಿಸುತ್ತಿಲ್ಲ. ಕೂಡಲೇ ಬಾಕಿಯಿರುವ ಬಿಲ್ ಪಾವತಿಗೆ ಮುಂದಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ, ಆಂಜಿನಯ್ಯ, ಸುರೇಶ ಹೊಸೂರು, ವೀರಯ್ಯ ಸ್ವಾಮಿ ಆಶಾಪುರು, ಡಿ.ರವೀಂದ್ರ ನಾಯಕ ಸೇರಿದಂತೆ ಇತರರು ಇದ್ದರು.