ಸ್ಲಂ ನಿವಾಸಿಗಳಿಗೆ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಿದ್ದು, ಹಕ್ಕುಪತ್ರಗಳನ್ನು ವಿತರಣೆ ಮಾಡಿದೆ, ಆದರೆ ನಿವೇಶನ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ನಗರಸಭೆ ಪೌರಾಯುಕ್ತ, ಜೆಇ ಮತ್ತು ಎಇಇ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಕಿಡಿ ಕಾರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸ್ಲಂ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದು, ಗುರುತಿಸಿದ ಜಮೀನು ಅಭಿವೃದ್ಧಿ ಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತೋರಿದ್ದಾರೆ. ಉಸ್ತುವಾರಿ ಸಚಿವರು ಸೂಚಿಸಿದರೂ ಈವರೆಗೆ ಕೆಲಸ ಮಾಡದೇ ಇರುವುದರಿಂದ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
2017ರಲ್ಲಿ 518, 929/2, 726/722 ಈ ಸರ್ವೆ ನಂಬರ್‌ಗಳು ಮಂಜೂರು ಆಗಿದ್ದು, ನಿವೇಶನ ಹಕ್ಕು ಪತ್ರ ಪಡೆದ ನಿವೇಶನ ರಹಿತರಿಗೆ ಗುರುತಿಸಿದ ಭೂಮಿಯಲ್ಲಿ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಹಾಗೂ ನಿವೇಶನ ಅಭಿವೃದ್ಧಿಪಡಿಸಲು ಕಳೆದ 28 ದಿನಗಳ ಹಿಂದೆಯೇ ಸೂಚನೆ ನೀಡಲಾಗುತ್ತು. ಸ್ಥಳಕ್ಕೆ ತೆರಳಿ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ ಅವರ ವಿರುದ್ಧ ಕಿಡಿಕಾರಿದ್ದಾರೆ.
2014ರಲ್ಲಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದು, ಈ ಬಗ್ಗೆ ನಿವೇಶನ ನಿರ್ಮಾಣಕ್ಕೆ ಪ್ರದೇಶ ಗುರುತು ಮಾಡಿಕೊಡಲು ನಿರ್ಲಕ್ಷ್ಯ ವಹಿಸಲಾಗಿದೆ. 4 ಸರ್ವೆ ನಂಬರ್‌ಗಳಲ್ಲಿ ಹಕ್ಕುಪತ್ರ ನೀಡಿದ್ದು ಇನ್ನುಳಿದ 230 ಹಕ್ಕು ಪತ್ರ ಬಾಕಿ ಇದೆ. 581 ಸರ್ವೆ ನಂಬರ್‌ನಲ್ಲಿ ಅತಿಕ್ರಮವಾಗಿದ್ದು, ತೆರವುಗೊಳಿಸಲು ಸೂಚಿಸಿದ್ದು, ಅತಿಕ್ರಮ ನಿವೇಶನದಲ್ಲಿ ಫಲಾನುಭವಗಳ ಜಾಗವನ್ನು ಗುರುತಿಸಿ ಪಟ್ಟಿ ನೀಡಲು ತಿಳಿಸಿದರು.
ನಗರಸಭೆಯಿಂದ ಹಕ್ಕು ಪತ್ರ ನೀಡಿದ ಎಲ್ಲ ನಿವೇಶನಗಳಿಗೆ ಖಾತಾ ಮಾಡಿಸಿಕೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಿದರು.
“ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸುವ 2770 ಮನೆಗಳಿಗೆ ₹160 ಕೋಟಿ ಅನುದಾನ ಟೆಂಡರ್ ಆಗಿದ್ದು, ಈ ಪೈಕಿ 300 ಮನೆಗಳು ಆಗಿವೆ. 1050 ಫಲಾನುಭವಗಳಿಗೆ ಲೋನ್ ಆಗಿದೆ, ಗುತ್ತಿಗೆದಾರರು ಉಪಗುತ್ತಿಗೆ ನೀಡದೆ ತಾವೇ ನಿರ್ಮಾಣ ಮಾಡಬೇಕು. ಶೇ.10 ರಷ್ಟು ವಂತಿಗೆ ನೀಡಿದ ಫಲಾನುಭವಗಳು ಮತ್ತು ವಂತಿಕೆ ನೀಡದೇ ಇರುವ ಫಲಾನುಭವಿಗಳ ಪಟ್ಟಿ ತಯಾರಿಸಿ ನೀಡಬೇಕು” ಎಂದರು.
2018ರಲ್ಲಿ ಸ್ಲಂ ನಿವಾಸಿಗಳಿಗೆ 500 ಮನೆಗಳು ಮಂಜೂರಾಗಿವೆ. ಇವುಗಳಲ್ಲಿ 467 ಮನೆಗಳು ಪೂರ್ಣಗೊಂಡಿವೆ. ಉಳಿದ 33 ಮನೆಗಳು ಬಾಕಿ ಇದ್ದು, ಬಾಕಿ ಮನೆಗಳನ್ನು ಯಾಕೆ ನಿರ್ಮಾಣ ಮಾಡಿಲ್ಲವೆಂದು ಪ್ರಶ್ನಿಸಿದರು.
“467 ಮನೆಗಳಿಗೆ ಲೋನ್ ಆಗಿದ್ದರೆ, 33 ಮನೆಗಳಿಗೆ ಯಾಕೆ ಮಾಡಿಲ್ಲ. ಬಾಕಿ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ; ಪಿಐಎಲ್ ದಾಖಲಿಸುವುದಾಗಿ ಎಚ್ಚರಿಕೆ
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಯೋಜನಾಧಿಕಾರಿ ಜಗದೀಶ ಗಂಗಣ್ಣವರ್,ಸ್ಲಂ ಬೋರ್ಡ್ ಅಧಿಕಾರಿಗಳು, ಗುತ್ತಿಗೆದಾರ ಈರಣ್ಣ ಹಾಗೂ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಜನಾರ್ಧನ ಹಳ್ಳಿಬೆಂಚಿ, ಅನಿಲ್ ಕುಮಾರ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ