ಗ್ರಾಮೀಣ ಪ್ರದೇಶದಿಂದ ಶಾಲೆ ಕಾಲೇಜುಗಳಿಗೆ ತೆರಳಲು ಸಮಯಕ್ಕೆ ಸರಿಯಾಗಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಜೆಡಿಎಸ್ ಮುಖಂಡ ನಿಜಾಮುದ್ದೀನ್ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಇವರು, “ನಿತ್ಯವೂ ಸಕಾಲಕ್ಕೆ ಬಸ್‌ಗಳ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಆಟೋ, ಟಾಟಾ ಏಸಿ ಸೇರಿದಂತೆ ಇತರ ವಾಹನಗಳಿಗೆ ಜೋತುಬಿದ್ದು ಹರಸಾಹಸಪಟ್ಟು ಶಾಲೆ ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದಾಗುವ ಅನಾನುಕೂಲಗಳನ್ನು ತಪ್ಪಿಸಲು ಕೂಡಲೇ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.
“ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳಲು ಸಕಾಲಕ್ಕೆ ಬಸ್ ಸೌಲಭ್ಯವಿಲ್ಲದೆ ಪ್ರಾಣದ ಹಂಗು ಲೆಕ್ಕಿಸದೆ ಬಸ್‌ಗಳಿಗೆ ಜೋತು ಬೀಳುವ ಪರಿಸ್ಥಿತಿ ಒದಗಿದೆ. ಸಕಾಲಕ್ಕೆ ಬಸ್‌ಗಳು ಸಿಗದೆ ಅಥವಾ ಬಸ್‌ಗಳು ಇದ್ದರೂ ಪೂರ್ತಿ ತುಂಬಿ ಬಾಗಿಲಲ್ಲಿ ಜೋತುಬಿದ್ದು ನಿಲ್ಲುವ ಚಿತ್ರಣ ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಕಂಡುಬರುತ್ತಿದೆ” ಎಂದರು.
“ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯ ಮತ್ತು ಮಾರ್ಗವನ್ನು ಹೊಂದಿಸದೆ ಇರುವುದರಿಂದ ವಿದ್ಯಾ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಹೋಗಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಿಗೆ ಬಸ್ಸುಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಟಂ-ಟಂ, ಟಾಟಾ ಮ್ಯಾಜಿಕ್, ಆಟೋ, ಗೂಡ್ಸ್, ಟ್ರ್ಯಾಕ್ಟರ್‌ಗಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಗ್ರಾಮೀಣ ಭಾಗಗಳಿಂದ ರಾಯಚೂರು ನಗರಕ್ಕೆ ಬರುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಸ್ ಪಾಸು ಇದ್ದರೂ ಖಾಸಗಿ ವಾಹನಗಳಿಗೆ ಮೊರೆಯಾಗಿ ಹಣಕೊಟ್ಟು ಸಂಚರಿಸಬೇಕಾಗಿರುತ್ತದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬಾಗಿಲಲ್ಲಿ ಜೋತು ಬಿದ್ದು, ಪ್ರಾಣಾಪಾಯ ಲೆಕ್ಕಿಸದೆ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಹೋಗಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಕಾಲೇಜುಗಳಿಗೆ ಹೋಗಿ ಬರುವುದೆಂದರೆ ದೊಡ್ಡ ಪ್ರಯಾಸದ ಕೆಲಸ. ಸಾಯಂಕಾಲ ಮನೆಗಳಿಗೆ ಮುಟ್ಟುವಷ್ಟರಲ್ಲಿ ಕತ್ತಲು ಆವರಿಸಿರುತ್ತದೆ. ಮಳೆ ಬಂದರಂತೂ ಸಮಸ್ಯೆಗಳು ಹೇಳತೀರದಷ್ಟಾಗಿದೆ. ರಸ್ತೆಯಲ್ಲಿ ಬರುವ ಖಾಸಗಿ ವಾಹನಗಳು, ದ್ವಿ-ಚಕ್ರ ವಾಹನಗಳ ಸವಾರರನ್ನು ನಿಲ್ಲಿಸಿ ಬೇರೆ ವಾಹನಗಳಿಗೆ ಅವಲಂಬಿತರಾಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಂಕಷ್ಟವನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಶಾಲಾಡಳಿತದಿಂದ ಚೆಕ್ ವಿತರಣೆ
“ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣುಮಕ್ಕಳನ್ನು ಪಿಯುಸಿ ಹಾಗೂ ಪದವಿ ಕಾಲೇಜುಗಳ ಪ್ರವೇಶ ದಾಖಲಾತಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ನಮ್ಮ ಗ್ರಾಮೀಣ ಭಾಗದಲ್ಲಿ ಉದ್ಭವವಾಗಿದೆ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಒಂದು ವಾರದೊಳಗೆ ವಿಶೇಷ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ವಾರದೊಳಗೆ ಮನವಿಗೆ ಸ್ಪಂದಿಸದೇ ಇದ್ದಲ್ಲಿ, ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಯರಗೇರಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 167ರ ಮದ್ಯರಸ್ತೆಯಲ್ಲಿ ಜೆಡಿಎಸ್ ವತಿಯಿಂದ ಅನಿವಾರ್ಯವಾಗಿ ಬೃಹತ್ ರಸ್ತೆ ತಡೆ ಹೋರಾಟ ಮಾಡಬೇಕಾಗುತ್ತದೆ. ಅದಕ್ಕೆ ಮುಂದಿನ ಯಾವುದೇ ಅಪಾಯಕ್ಕೆ ಅಥವಾ ಅಪಘಾತಕ್ಕೆ ಜಿಲ್ಲಾಡಳಿತ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೇರ ಜವಾಬ್ದಾರರಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
