ಮುಡಾ ಹಗರಣ ಮುಂದಿಟ್ಟುಕೊಂಡು ನನಗೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಿರುವುದು ಅಕ್ಷಮ್ಯ ಹಾಗೂ ನಾನು ತಪ್ಪು ಮಾಡಿಲ್ಲ ನಾನು ರಾಜೀನಾಮೆ ನೀಡಲ್ಲ ಎಂದು ರಾಯಚೂರು ಸಂಸದ ಜಿ ಕುಮಾರ್ ನಾಯ್ಕ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ತಪ್ಪು ಮಾಡಿರದ ಪ್ರಕರಣವನ್ನಿಟ್ಟುಕೊಂಡು ಚುನಾಯಿತ ಪ್ರತಿನಿಧಿಯಾದ ನನ್ನ ರಾಜಿನಾಮೆ ಕೇಳುವುದು ತಪ್ಪು, ನಾನು ತಪ್ಪೇ ಮಾಡಿಲ್ಲ. ನಾನು ನನ್ನನ್ನು ಆಯ್ಕೆ ಮಾಡಿದ ಜನರಿಗೆ ದ್ರೋಹ ಮಾಡಿಲ್ಲ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಪುನರುಚ್ಚರಿಸಿದರು.
“ಮುಡಾ ಸೈಟ್ ಪ್ರಕರಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ನನ್ನ ಹೆಸರು ಪ್ರಸ್ತಾಪಿಸಿದ್ದು ಈ ಸಂಬಂಧ ಅಧಿಕಾರಿಗಳು ನನಗೆ ಮಾಹಿತಿ ತಿಳಿಸಿಲ್ಲ. ಪ್ರಕರಣದ ಬಗ್ಗೆ ಈ ಹಿಂದೆ ಮಾಹಿತಿ ಕೇಳಿದಾಗ ಉತ್ತರಿಸಿದ್ದೆ. ಲೋಕಾಯುಕ್ತ ಅಧಿಕಾರಿಗಳ ತಿಳವಳಿಕೆಯ ಮೇಲೆ ಅವರು ವರದಿ ತಯಾರಿಸಿದ್ದು, ವಾಸ್ತವವಾಗಿ ನಾನು ತಪ್ಪು ಮಾಡಿಲ್ಲ. ಪ್ರಕರಣದ ಬಗ್ಗೆ ವಕೀಲರ ಜೊತೆ ಚರ್ಚಿಸಿ ಕಾನೂನು ರೀತಿಯಲ್ಲಿ ಎದುರಿಸುತ್ತೇನೆ” ಎಂದರು.
ನಾನು ನನ್ನ ಕ್ಷೇತ್ರದ ಮತದಾರರಿಂದ ಆಯ್ಕೆಯಾಗಿದ್ದೇನೆ. ನನ್ನ ಜನಕ್ಕೆ ಮೋಸ ಮಾಡುವ ಯಾವುದೇ ಕೆಲಸ ಮಾಡಿಲ್ಲ, ಮಾಡುವುದು ಇಲ್ಲ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಭೂಸ್ವಾಧೀನ ಕಾಯ್ದೆಯಂತೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದೇನೆ ಯಾವುದೇ ಲೋಪ, ತಪ್ಪು ಎಸಗಿಲ್ಲ. ಅಂತಹದ್ದೇನಾದರು ಆಗಿದ್ದಲ್ಲಿ ಇದರ ವಿರುದ್ದ ಪ್ರಶ್ನೆ ಮಾಡುವ, ದೂರು ನೀಡುವ ಅವಕಾಶವಿತ್ತು ಯಾರು ಮಾಡಲಿಲ್ಲ” ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಲೋಪವಾಗಿದ್ದಲ್ಲಿ 20ವರ್ಷದ ವರೆಗೆ ಯಾರು ಚಕಾರ ಎತ್ತದೇ ಈಗ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ. ನಾನು ಮೈಸೂರು ಜಿಲ್ಲಾಧಿಕಾರಿಯಾಗುವ ಮುನ್ನವೇ ಭೂಸ್ವಾಧೀನವಾಗಿತ್ತು, ನಾನು ಅಧಿಕಾರಿಕ್ಕೆ ಬಂದಾಗ ನನ್ನ ವ್ಯಾಪ್ತಿಯಲ್ಲಿ ನಡೆದುಕೊಂಡಿದ್ದೇನೆ” ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು | ಮಾದಕ ವಸ್ತು ಮಾರಾಟ ಜಾಲ ಕಡಿವಾಣಕ್ಕೆ ಮನವಿ
ಈ ವೇಳೆ ಮಹ್ಮದ್ ಶಾಲಂ, ಶಾಂತಪ್ಪ, ನರಸಿಂಹ ಮಾಡಗಿರಿ ಇನ್ನಿತರರು ಹಾಜರಿದ್ದರು.
