ರಾಯಚೂರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಎರಡನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಆಗಮಿಸಿ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದರು. ಈ ವೇಳೆ ಸಿಟ್ಟಿಗೆದ್ದ ಪ್ರತಿಭಟನಾ ನಿರತ ಮಹಿಳೆಯರು, ಇದು ಆಲಿಸುವ ಸರ್ಕಾರವಲ್ಲ, ಕೇವಲ ಆಶ್ವಾಸನೆ ನೀಡುವ ಸರ್ಕಾರ. ಕಳೆದ ವರ್ಷ ನೀಡಿದ ಭರವಸೆಗಳು ಏನಾಯಿತು ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
“ಈ ಹಿಂದೆ 2024ರಲ್ಲಿ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇಡಿಕೆ ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ವರ್ಷ ಕಳೆದರೂ ಯಾವುದೇ ಬೇಡಿಕೆ ಸಮರ್ಪಕವಾಗಿ ಈಡೇರಿಲ್ಲ. ಮತ್ತೆ ಆಶ್ವಾಸನೆ ಹೇಳಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಯಾವುದೇ ಕಾರಣಕ್ಕೂ ಈ ಹೋರಾಟವನ್ನು ಹಿಂಪಡೆಯುವುದಿಲ್ಲ” ಎಂದರು.

ಜನವರಿ 30ರವರೆಗೂ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಈ ದಿನಾಂಕದೊಳಗೆ ಸಮಸ್ಯೆಗಳ ಕುರಿತು ಒಂದು ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದೊಂದಿಗೆ ಚರ್ಚಿಸಿ ಮಾಹಿತಿ ನೀಡಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಹೋರಾಟವನ್ನು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಗಣರಾಜ್ಯ ದಿನಾಚರಣೆಯಲ್ಲಿ ಎಡವಟ್ಟು; ಎರಡು ಬಾರಿ ಹಾರಿದ ಧ್ವಜ
“ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ. ನಮಗೆ ಸರ್ಕಾರವನ್ನು ಬೆಂಬಲಿಸುವುದು ಗೊತ್ತು, ಸರ್ಕಾರವನ್ನು ಎಚ್ಚರಿಸುವುದು ಗೊತ್ತು. ಈ ಸೂಕ್ಷ್ಮತೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದು ಎಚ್ಚರಿಕೆ ನೀಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
