ರಾಯಚೂರು ನಗರದಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಸಾಮಾನ್ಯ ಸಭೆ ಕರೆದು, ವಾರ್ಡವಾರು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, ಮನವಿ ಮಾಡಿದೆ.
ನಗರಸಭೆ ಹಿರಿಯ ಸದಸ್ಯ ಜಯಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ನಿಯೋಗವು ಭೇಟಿ ಮಾಡಿದೆ. “ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ಆದರೆ, ಸದಸ್ಯರು ಅಸ್ತಿತ್ವದಲ್ಲಿದ್ದು ಚುನಾಯಿತ ಸದಸ್ಯರನ್ನು ಕಡೆಗಣಿಸಿ ‘ಸಿ ಕಾರ್ಯ’ ನಿರ್ವಹಿಸಲಾಗುತ್ತಿದೆ” ಎಮದು ದೂರಿದ್ದಾರೆ.
“ಆಯಾ ವಾರ್ಡಿನ ಜನರು ನಗರಸಭೆ ಸದಸ್ಯರೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ ಕುರಿತು ಅಧಿಕಾರಿಗಳು ಸಮರ್ಪಕ ಸ್ಪಂದನೆ ನೀಡುತ್ತಿಲ್ಲ. ಚುನಾಯಿತ ಸದಸ್ಯರನ್ನು ಕಡೆಗಣಿಸುವುದಾದರೆ ಅಧಿಕಾರದಲ್ಲಿ ಮುಂದುವರೆಯುವದರಲ್ಲಿ ಅರ್ಥವಿಲ್ಲ. ಕೂಡಲೇ ಅಧಿಕಾರಿಗಳು ಹಾಗೂ ಸದಸ್ಯರ ಸಭೆ ಕರೆದು ಸಮಸ್ಯೆಗಳ ನಿವಾರಣೆ ಮಾಡಬೇಕು” ಎಂದು ಜಯಣ್ಣ ಒತ್ತಾಯಿಸಿದ್ದಾರೆ.
ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಮಾತನಾಡಿ, “ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಬರಲಿದ್ದು, ಸಭೆ ಕರೆಯುವ ಕುರಿತು ಗಮನಕ್ಕೆ ತರುತ್ತೇವೆ. ವಾರ್ಡವಾರು ಸಮಸ್ಯೆಗಳ ಪಟ್ಟಿ ನೀಡಿದರೆ, ಪರಿಹಾರಕ್ಕೆ ಕ್ರಮವಹಿಸಲಾಗುತ್ತದೆ” ಎಂದರು.
ನಿಯೋಗದಲ್ಲಿ ನಗರಸಭೆ ಸದಸ್ಯ ಇ ಶಶಿರಾಜ, ದರೂರು ಬಸವರಾಜ, ಎನ್ ಶ್ರೀನಿವಾಸರೆಡ್ಡಿ, ಸಾಜೀದ್ ಸಮೀರ್, ಇ.ಶಶಿರಾಜ, ಎನ್.ಕೆ.ನಾಗರಾಜ, ನರಸರೆಡ್ಡಿ, ಜಿಂದಪ್ಪ, ದರೂರು ಬಸವರಾಜ, ಬಿ.ರಮೇಶ, ನಾಗರಾಜ, ಕಡಗೋಳ ಆಂಜಿನೇಯ್ಯ, ರವೀಂದ್ರ ಜಲ್ದಾರ, ನರಸಿಂಹಲು ಮಾಡಗಿರಿ, ಆಂಜಿನೇಯ್ಯ ಸೇರಿದಂತೆ ಅನೇಕರಿದ್ದರು.
ವರದಿ : ಹಫೀಜುಲ್ಲ