ಕಳೆದ ಎರಡು ತಿಂಗಳಿನಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲ್ಲಿನ ಸಿಬ್ಬಂದಿ ವರ್ಗದವರು ಸರಿಯಾಗಿ ಕರ್ತವ್ಯಕ್ಕೆ ಬರುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಅಧಿಕಾರಿಗಳಿಂದ ಸ್ಪಂದನೆ ಇಲ್ಲವೆಂದು ಹಾಲಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ಆರೋಪಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. “ನಾವು ಅಧಿಕಾರಕ್ಕೆ ಬಂದು ಸುಮಾರು ಮೂರು ತಿಂಗಳು ಕಳೆದರೂ ಪಿಡಿಒ, ಕಾರ್ಯದರ್ಶಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ನಾವು ಹಲವು ಬಾರಿ ಮಸ್ಕಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶಾಸಕರ ಗಮನಕ್ಕೆ ತಂದರೂ ಕೂಡ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಾನೇ ನಮ್ಮ ಪಂಚಾಯತಿಯ ಸರ್ವ ಸದಸ್ಯರ ಸಭೆ ಕರೆದು ಮುಂದೆ ಏನು ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಸಭೆ ಕರೆದಿದ್ದೇನೆ” ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ, “ಹಾಲಾಪೂರ ಗ್ರಾಮ ಪಂಚಾಯತಿ ಮಸ್ಕಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿಯೆಂಬ ಹೆಸರಿದೆ. ಆದರೆ ಇಲ್ಲಿ ಕೆಲಸ ಮತ್ತು ಅಭಿವೃದ್ಧಿ ಮಾತ್ರ ಶೂನ್ಯ. ಗ್ರಾಮ ಪಂಚಾಯಿತಿ ಒಟ್ಟು 26 ಸದಸ್ಯರನ್ನು ಒಳಗೊಂಡಿದ್ದು, 14 ಹಳ್ಳಿ,4 ಕ್ಯಾಂಪ್‌ಗಳನ್ನು ಹೊಂದಿದೆ. ಇಷ್ಟು ದೊಡ್ಡ ಪ್ರಮಾಣದ ಪಂಚಾಯಿತಿಗೆ ಪಿಡಿಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಯಾವತ್ತೂ ಸರಿಯಾಗಿ ಕರ್ತವ್ಯಕ್ಕೆ ಬಂದಿದ್ದು ಕಂಡುಬಂದಿಲ್ಲ” ಎಂದು ಆರೋಪಿಸಿದರು.
“ಪಿಡಿಒ ಸೇರಿದಂತೆ ಇತರ ಸಿಬ್ಬಂದಿ ವರ್ಗದವರೂ ಒಂದಲ್ಲ ಒಂದು ಕುಂಟು ನೆಪ ಹೇಳಿ ಗ್ರಾಮ ಪಂಚಾಯಿತಿಗೆ ಚಕ್ಕರ್ ಹೊಡೆಯುತ್ತಾರೆ. ಈಗಿರುವ ಪಿಡಿಒ ಮಲ್ಲಿಕಾರ್ಜುನ ರೆಡ್ಡಿ ಅವರು ಅಧ್ಯಕ್ಷೆ ಮಂಜಮ್ಮ ಅವರನ್ನು ಪುಸಲಾಯಿಸಿ ಚಕ್ಕಿನ ಮೇಲೆ ಸಹಿ ಪಡೆದು ಹಣ ದುರುಪಯೋಗ ಮಾಡಿದ್ದಾರೆಂಬ ಆರೋಪದಡಿ ಸೂಕ್ತ ತನಿಖೆಗಾಗಿ ಅಧಿಕಾರಿಗಳಿಗೆ ದೂರು ನೀಡಿದರೂ ಕೂಡ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿವೆ. ಸಾರ್ವಜನಿಕರಿಗೆ ಸಮರ್ಪಕವಾಗಿ ನೀರಿನ ಪೂರೈಕೆಯಾಗುತ್ತಿಲ್ಲ. ಒಳಚರಂಡಿಗಳು ಅಸ್ತವ್ಯಸ್ಥಗೊಂಡಿವೆ. ಸಿಬ್ಬಂದಿಗಳಿಗೆ ವೇತನ ಇಲ್ಲ. ಸಣ್ಣಪುಟ್ಟ ಕೆಲಸ ಮಾಡಿದರೆ ನಮಗೂ ಕೂಡ ಹಣ ಬಿಡುಗಡೆ ಮಾಡಿಲ್ಲ. ಹೀಗಾದರೆ ನಾವು ಹೇಗೆ ಕೆಲಸ ಮಾಡುವುದು. ಗ್ರಾಮಗಳಲ್ಲಿ ಸರಿಯಾದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ನಿಜವಾಗಿಯೂ ಇಂತಹ ದರಿದ್ರ ಪಂಚಾಯತಿ ರಾಜ್ಯದಲ್ಲಿಯೇ ಇಲ್ಲ” ಎಂದು ಗ್ರಾ.ಪಂ ಸದಸ್ಯ ಚಂದಪ್ಪ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಸಿದ ಪ್ರಗತಿಪರ ಮುಖಂಡರು,”ಏನಾದರೂ ಕೆಲಸ ಮಾಡಿಸಿಕೊಳ್ಳಲು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದರೆ ಸಿಬ್ಬಂದಿಗಳು ಇರುವುದೇ ಇಲ್ಲ. ಅಧ್ಯಕ್ಷರಿಂದ ಖಾಲಿ ಚೆಕ್‌ಗೆ ರುಜು ಮಾಡಿಸಿಕೊಂಡು ಅದನ್ನು ಕರವಸೂಲಿಗೆ ಜಮಾ ಮಾಡಿ, ಯಾರಿಗೂ ತಿಳಿಯದಂತೆ ಸಿಂಧನೂರಿನ ʼಆರಾಧ್ಯ ಎಂಟರ್ ಪ್ರೈಸಸ್ʼ ಎಂಬ ಅಂಗಡಿಗೆ ₹11,94,293 ಮೊತ್ತವನ್ನು ನೀಡಿದ್ದಾರೆ” ಎಂದು ಆರೋಪಿಸಿದರು.
“ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಬ್ಯಾಂಕ್‌ನಿಂದ ಮಾಹಿತಿ ಪಡೆದಾಗ ಹಣ ಲಪಟಾಯಿಸಿರುವ ಕುರಿತು ಮಾಹಿತಿ ತಿಳಿದುಬಂದಿದ್ದು, ಅಭಿವೃದ್ಧಿ ಅಧಿಕಾರಿ ಸೇವೆಯಿಂದ ಅಮಾನತುಗೊಳಿಸಿ, ಸರ್ಕಾರದ ಹಣ ವಸೂಲಿ ಮಾಡಬೇಕು” ಗ್ರಾಂ.ಪಂ. ಅಧ್ಯಕ್ಷೆ ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.
ಹಣ ಲಪಾಟಿಸಿ ಗೈರಾದ ಅಧಿಕಾರಿ : “ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಸ್ಟ್ 1 ರಿಂದ ಗ್ರಾಮ ಪಂಚಾಯಿತಿ ಕಚೇರಿಯತ್ತ ಸುಳಿದಿಲ್ಲ. ಸಾರ್ವಜನಿಕರ ಸಂಪರ್ಕಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ. ಕೆಲಸಗಳ ನಿಮಿತ್ತ ಸಾರ್ವಜನಿಕರು ಫೋನ್ ಮೂಲಕ ಸಂಪರ್ಕಿಸಿದರೂ ಲಭ್ಯವಾಗುತ್ತಿಲ್ಲ. ಇತ್ತ ತಾಲೂಕು ಪಂಚಾಯತ್ ಅಧಿಕಾರಿಗಳು ಪಿಡಿಒ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇನ್ನು ಎರಡು ದಿನದಲ್ಲಿ ಕಚೇರಿಗೆ ಬರಲಿಲ್ಲವೆಂದರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಾದಿಗ ಸಮುದಾಯಕ್ಕೆ ಒಳಮೀಸಲಾತಿಗೆ ಒತ್ತಾಯ; ನ.18ರಂದು ಹೈದರಾಬಾದ್ ಚಲೋ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚಂದಪ್ಪ ದೊಡ್ಡಮನಿ, ದಲಿತ ಮುಖಂಡರುಗಳಾದ ಚೆನ್ನಪ್ಪ ಯೇಡಿಗಬಾಳ, ಸಿದ್ದಾರ್ಥ್ ಹಲಪುರ್, ಮೌನೇಶ, ಅಮರೇಶ, ಮಹಾಂತೇಶ ಜಂಗಮರಹಳ್ಳಿ, ಶಂಕರಪ್ಪಗೌಡ ಯದ್ದಲದಿನ್ನಿ, ಜೊಕಿನ್ ಯದ್ದಲದಿನ್ನಿ, ನಿರೂಪಾದಪ್ಪ ಸೇರಿದಂತೆ ಇತರರು ಇದ್ದರು.