ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬುಧವಾರ ರಾಯಚೂರಿನ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಬಂಧಿಸಲಾಯಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಹೋರಾಟಗಾರರು ಧರಣಿ ನಡೆಸಿದ ಬಳಿಕ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಬಂದೋಬಸ್ತ್ ನಲ್ಲಿದ್ದ ಪೊಲೀಸರು, ಅವರನ್ನು ತಡೆದು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಎಸ್ ಮಾರೆಪ್ಪ, ಅಂಬಣ್ಣ ಆರೋಲಿಕರ್ ಮಾತನಾಡಿ, 2023ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಇದೀಗ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಾರದು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಆನ್‌ಲೈನ್ ಬೆಟ್ಟಿಂಗ್ ಗೇಮ್‌ನಿಂದ ಯುವಕರು ಬೀದಿಪಾಲು: ನಿಷೇಧಕ್ಕೆ ಆಗ್ರಹಿಸಿ ಮನವಿ
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಎಂ.ವಿರೂಪಾಕ್ಷಿ, ಜೆ.ಬಿ.ರಾಜು, ಪಿ.ಯಲ್ಲಪ್ಪ, ನರಸಪ್ಪ ದಂಡೋರಾ, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲ್ ಕುಮಾರ್, ರಾಜು, ಗಣೇಶ ಪಾಲ್ಯಂ, ಶಂಶಾಲಂ, ಎಚ್.ದೊಡ್ಡಪ್ಪ, ಎಸ್.ರಾಜು, ನಾಗರಾಜ, ಶಾಂತಪ್ಪ ಉಪ್ರಾಳ, ರಾಘವೇಂದ್ರ ಬೋರೆಡ್ಡಿ, ನರಸಿಂಹಲು ಸೇರಿದಂತೆ ಸಮಾಜದ ಮುಖಂಢರು ಪಾಲ್ಗೊಂಡಿದ್ದರು.


