ಒಳಮೀಸಲಾತಿಯ ವರ್ಗೀಕರಣ ಜಾರಿಗೆ ತಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಸದಾಶಿವ ಆಯೋಗದ ವರದಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಬುಧವಾರ ರಾಯಚೂರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿಯಲ್ಲಿನ ಅವಕಾಶ ವಂಚಿತ, ಶೋಷಿತ ಒಳ ಸಮುದಾಯಗಳನ್ನು ಮರು ವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಆದರೂ ಹಿಂದಿನ ರಾಜ್ಯ ಸರ್ಕಾರ ಮೀಸಲಾತಿಯ ಆಶಯವಾದ ಸಾಮಾಜಿಕ, ಶೈಕ್ಷಣಿಕ ಮೂಲ ಮಾನದಂಡವನ್ನು ಕಡೆಗಣಿಸಿ ಕೇವಲ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಗುರುತಿಸಲಾಗುತ್ತಿದೆ ಎಂದು ದೂರಿದರು.
ರಾಜ್ಯದ 101 ಪರಿಶಿಷ್ಟ ಜಾತಿಯ ವೈಜ್ಞಾನಿಕ ಮಾನದಂಡಗಳ ಮೂಲಕ ಅಧ್ಯಾಯನ ಮಾಡಿ ವಸ್ತುನಿಷ್ಠ ವರದಿ ಆಧಾರಿಸಿ ಪರಿಗಣಿಸದೇ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ ಮರು ವರ್ಗೀಕರಿಸಿ ಮೇಲ್ನೋಟಕ್ಕೆ 5 ಗುಂಪುಗಳನ್ನಾಗಿ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಆಂಧ್ರಪ್ರದೇಶ ರಾಜ್ಯ ಮಾಡಿರುವ ಒಳಮೀಸಲಾತಿ ವರ್ಗೀಕರಣ ಮಾಡಿರುವುದು ಅಸಂವಿಧಾನಿಕ ಎಂದು ಒಳಮೀಸಲಾತಿ ವಿರುದ್ಧ ತೀರ್ಪು ನೀಡಿತ್ತು. ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ನಡೆ ಅನುಸರಿಸಿ ಪರಿಶಿಷ್ಟ ಜಾತಿಯ ಲಂಬಾಣಿ, ಭೋವಿ, ಕೊರಮ, ಕೊರಚ ಸೇರಿ 99 ಸಮುದಾಯಗಳು ಸ್ಪಷ್ಟವಾಗಿ ಒಳ ಮೀಸಲಾತಿಯನ್ನು ವಿರೋಧಿಸಿದೆ. ಸದಾಶಿವ ಆಯೋಗ ವರದಿ ರದ್ದುಮಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿವೆ. ದೇಶದಲ್ಲಿ ಅಸ್ಪೃಶ್ಯತೆ ನಿಷೇಧ ಮಾಡಿದರೂ ಸ್ಪರ್ಶ, ಅಸ್ಪರ್ಶ ಎಂಬ ಪರಿಕಲ್ಪನೆಯಡಿ ವರ್ಗೀಕರಣ ಮಾಡಿರುವುದು ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ ಎಂದು ದೂರಿದರು.
ಇದನ್ನು ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಪರಿಶಿಷ್ಟ ಜಾತಿ ವಕೀಲರ ಸಂಘದಿಂದ ಮನವಿ
2023ರ ಮಾರ್ಚ್ 24ರಂದು ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಸಂಬಂಧ ತೆಗೆದುಕೊಂಡ ನಿರ್ಧಾರ ದಮನಿತರ, ಬುಡಕಟ್ಟುಗಳ ಐಕ್ಯತೆಯನ್ನು ಒಡೆಯುವ ಹುನ್ನಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ ಈರಣ್ಣ, ಪ್ರಧಾನ ಕಾರ್ಯದರ್ಶಿ ಎನ್ ಶಿವಣ್ಣ ಪವಾರ್, ನರಸಿಂಹಲು ಕಮಲಾಪೂರು, ಮಾಲಾ ಭಜಂತ್ರಿ, ಶಶಿಕಲಾ ಭೀಮರಾಯ ಉಪಸ್ಥಿತರಿದ್ದರು.
