ಸರ್ಕಾರಿ ದಾಖಲೆಗಳ ಪ್ರಕಾರ ರಾಯಚೂರು ನಗರದ ಮಾವಿನಕೆರೆಯ 7. 37 ಎಕರೆ ಒತ್ತುವರಿಯಾಗಿದೆ. 121 ಎಕರೆ ಭೂಮಿ ಲಭ್ಯವಿದ್ದ ಎರಡು ಸರ್ವೆಗಳಲ್ಲಿ ಒಂದು ಖಾಸಗಿ ಮತ್ತು ಇನ್ನೊಂದು ಇನಾಂ ಭೂಮಿಯಾಗಿದ್ದು, ಕೆರೆ ಅಭಿವೃದ್ಧಿಗೆ ತೊಡಕಾಗಿದೆ. ಕಾನಾನೂತ್ಮಾಕವಾಗಿ ಸಮಸ್ಯೆ ನಿವಾರಿಸಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಣ್ಣನೀರಾವರಿ ಸಚಿವ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರದ ಕೆರೆಗಳ ಅಭಿವೃದ್ದಿ ಕುರಿತು ನಗರಸಭೆ ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. “ಮಾವಿನ ಕೆರೆಯಲ್ಲಿ ಖಾಸಗಿಯವರಿಂದ ಭೂಮಿಯನ್ನು ಪಡೆಯಲು ಜಿಲ್ಲಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಗೆ ಮುಂದಾಗಬೇಕು” ಎಂದು ತಿಳಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, “ನಗರದ ಕೆರೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಹಕರಿಸಿದರೆ ಮಾತ್ರ ಅಭಿವೃದ್ದಿ ಸಾಧ್ಯವಿದೆ. ಪಕ್ಷಾತೀತವಾಗಿ ಎಲ್ಲ ಸರ್ಕಾರಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಮೂಲ ಸೌಕರ್ಯ ಒದಗಿಸಲಾಗುತ್ತದೆ” ಎಂದರು.
“ಮಾವಿನಕೆರೆಯು ಮೂರು ಸರ್ವೆನಂಬರಗಳಲ್ಲಿದ್ದು, 1231, 1236, 1331 ಸರ್ವೇ ನಂ.ನ ಈ ಕೆರೆಯು 1982ರಲ್ಲಿ ಇನಾಂಭೂಮಿ ಮ್ಯುಟೇಷನ್ ಆಗಿದ್ದು, ರದ್ದುಗೊಳಿಸಲಾಗಿದೆ. ಉಳಿದಂತೆ ಖಾಸಗಿಯವರ ಪಟ್ಟಾ ಭೂಮಿಯಿದೆ. 2 ಎಕರೆ 24 ಗುಂಟೆ ಭೂಮಿಯನ್ನು ಸ್ಲಂ ಬೋರ್ಡ್‌ನಿಂದ ಸ್ಲಂ ಘೋಷಣೆ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮಾಹಿತಿ ನೀಡಿದರು.
“ಈಗಾಗಲೇ ಕೆರೆ ಅಭಿವೃದ್ದಿಗೆ ಆರ್‌ಡಿಎಯಿಂದ 10 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಜೈನ ಸಂಘದಿಂದ ಕಳೆದ ಬಾರಿ ಹೂಳು ತೆಗೆಯಲೂ ಕೂಡ ಪ್ರಯತ್ನಿಸಲಾಗಿತ್ತು. ಆದರೆ ಸಾಧ್ಯವಾಗದೇ ಹೋಗಿದೆ. ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೆರೆ ಅಭಿವೃದ್ದಿಗೊಳಿಸಬೇಕು” ಎಂದು ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದರು.
ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, “ಈ ಹಿಂದೆ ಜಿಲ್ಲಾಡಳಿತ ಮಾವಿನಕೆರೆಗೆ ಬಾಂಡ್ ನಿರ್ಮಿಸಿದ್ದರಿಂದ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಂತಾಯಿತು. ಕೆರೆಗೆ ನೀರು ಬಂದಾಗ ಕೆರೆಗಳಲ್ಲಿರುವ ಭೂಮಿ ಬಳಕೆಯಾಗುವದಿಲ್ಲ. ಆದರೆ ಖಾಸಗಿರುವರು ಲೇಔಟ್ ಮಾಡಲು ಅವಕಾಶ ನೀಡಿರುವುದಕ್ಕೆ ಎಲ್ಲರೂ ಹೊಣೆಯಾಗಿದ್ದೇವೆ. ಸಾರ್ವಜನಿಕರಲ್ಲಿ ಮಾವಿನಕೆರೆ ಒತ್ತುವರಿಯಾಗಿರುವ ಆರೋಪವಿದೆ. ನೈಜ ಅಭಿವೃದ್ಧಿಗೆ ಮುಂದಾಗಬೇಕಿದೆ. ಮಾವಿನಕರೆ ದುರ್ವಾಸನೆಯಿಂದ ಕೂಡಿದ್ದು, ಸಾಕಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ” ಎಂದರು.
ರವೀಂದ್ರ ಜಲ್ದಾರ ಮಾತನಾಡಿ, “ಮಾವಿನಕೆರೆ ಬಳಿ ತ್ಯಾಜ್ಯವನ್ನು ಹಾಕುತ್ತಿರುವದರಿಂದ ಸತ್ಯನಾಥ ಕಾಲೋನಿ, ಯರಗೇರಾ ಲೇಔಟ್ ಸೇರಿದಂತೆ ಬಹುತೇಕ ಬಡವಾಣೆಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ ತಡೆಯಲು ಕೂಡಲೇ ತ್ಯಾಜ್ಯ ತೆರವುಗೊಳಿಸಬೇಕು” ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಶಾಂತಪ್ಪ ಮಾತನಾಡಿ, “ಐತಿಹಾಸಿಕವಾಗಿರುವ ಮಾವಿನಕೆರೆ ಒತ್ತುವರಿಯಾಗುತ್ತಿರುವುದನ್ನು ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ತ್ವರಿತ ಕ್ರಮಗಳ ಮೂಲಕ ಕೆರೆ ಅಭಿವೃದ್ದಿಪಡಿಸಬೇಕು” ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಷೀರುದ್ದೀನ್ ಮಾತನಾಡಿ, “ಕೆರೆಯನ್ನು ಅಭಿವೃದ್ದಿಪಡಿಸಲು ತಡೆಯಾಜ್ಞೆ ತೆರವುಗೊಳಿಸಬೇಕಿದೆ. ಅಲ್ಲದೆ ಮಾವಿನಕೆರೆಯಲ್ಲಿರುವ ಸಂಗ್ರಹಿತ ನೀರನ್ನು ಬಿಡುಗಡೆಗೊಳಿಸಿದೆ ಒಣಗಲು ಅವಕಾಶ ದೊರಕುತ್ತದೆ. ಲಭ್ಯವಿರುವ ಅನುದಾನದಲ್ಲಿ ಕಾಮಗಾರಿ ಪ್ರಾರಂಬಿಸಬೇಕು” ಎಂದರು.
“ನಗರದ ಬೀಜನಗೇರಾ ರಸ್ತೆಯಲ್ಲಿರುವ ಗರ‍್ಲಕುಂಟೆ ಕೆರೆ 17 ಎಕರೆಯಲ್ಲಿದ್ದು, 1 ಎಕರೆ 30 ಗುಂಟೆಗೆ ನ್ಯಾಯಾಲದಲ್ಲಿ ದಾವೆ ಹೂಡಲಾಗಿದೆ. ಆರ್‌ಟಿಸಿ ಪ್ರಕಾರ 17 ಎಕರೆ ಗುಂಟೆ ಸರ್ಕಾರಿ ಭೂಮಿಯಿದ್ದು, ತಡೆಯಾಜ್ಞೆ ತೆರವುಗೊಳಿಸಲು ಕ್ರಮವಹಿಸಲಾಗುವುದು” ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸಭೆಗೆ ತಿಳಿಸಿದರು.
“ನಗರಸಭೆಯಿಂದ ಕಸ ವಿಲೇವಾರಿ ಸಮಸ್ಯೆಯಾಗಿದ್ದು, 242 ಮಂದಿ ಕಾರ್ಮಿಕರಿಂದ ನಗರ ಸ್ವಚ್ಛತೆ ನಿರ್ವಹಿಸಲು ಸಾಧ್ಯವೇ” ಎಂದು ಶಾಸಕ ಡಾ.ಶಿವರಾಜ ಪಾಟಿಲ್ ಪ್ರಶ್ನಿಸಿದರು.
106 ಖಾಯಂ ಹಾಗೂ 142 ನೇರ ಪಾವತಿಯಡಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವದಾಗಿ ಯೋಜನಾಧಿಕಾರಿ ತಿಳಿಸಿದರು.
ಈ ಸುದ್ದಿ ಓದಿಧ್ದೀರಾ? ರಾಯಚೂರು | ಖಾಯಂ ಶಿಕ್ಷಕರ ನೇಮಕಾತಿಗೆ ಎಸ್ಎಫ್ಐ ಒತ್ತಾಯ
“ಕಳೆದ ಬಾರಿ ತುರ್ತು ಕೆಲಸ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಐದು ತಿಂಗಳ ವೇತನ ಪಾವತಿಸಿದ್ದು, ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಅದೇ ವ್ಯವಸ್ಥೆ ಮರು ಪ್ರಾರಂಭಿಸಬೇಕೆಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಸಭೆಯಲ್ಲಿ ಎಸ್‌ಪಿ ನಿಖಿಲ್ ಬಿ, ನಗರಸಭೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು