ಮೂಲ ಸೌಕರ್ಯಗಳು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣ ಪಂಚಾಯಿತಿ ಎದುರು ಪಟ್ಟಣದ ಹಲವು ಸಂಘಟನೆಗಳು ಜಂಟಿಯಾಗಿ ಬುಧವಾರದಂದು ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್ಐ), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್), ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಜಂಟಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಪಟ್ಟಣದ ಕೋಠ ಕ್ರಾಸ್‌ನಿಂದ ಪಂಚಾಯತಿವರಗೆ ಮೆರವಣಿಗೆ ನಡೆಸಿ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಮುಖಂಡ ರಮೇಶ್ ವೀರಾಪುರ ಮಾತನಾಡಿ, “ಸ್ವಚ್ಛತೆ ಇಲ್ಲದೆ, ಪಟ್ಟಣದ ಕೆಲವು ಮುಖ್ಯ ರಸ್ತೆಗಳಲ್ಲಿ ಗಬ್ಬು ನಾರುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಟ್ಟಿ ವಿಲೇಜ್‌ನಲ್ಲಿ ಕುಡಿಯುವ ನೀರಿಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡಿದರೂ ಅಧಿಕಾರಿಗಳು, ಶಾಸಕರು ಕಂಡು ಕಾಣದ ಕುರುಡರಂತೆ ಇದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪಟ್ಟಣದಲ್ಲಿ ಕುಡಿಯಲು ನೀರಲ್ಲದೆ ಹಟ್ಟಿಯನ್ನು ತ್ಯಜಿಸಿ ಪಕ್ಕದ ಹಳ್ಳಿಗೆ ಗುಳೆ ಹೊರಟಿದ್ದಾರೆ. ಇಲ್ಲಿ ವಾಸಿಸುವ ಕುಟುಂಬಗಳು ನಿತ್ಯವೂ ನೀರಿಗಾಗಿ ಸೈಕಲ್, ಬೈಕ್, ಟ್ಯಾಂಕರ್, ಆಟೋಗಳನ್ನು ಅವಲಂಬಿಸಿ, ಕಿಲೋಮೀಟರ್‌ಗಟ್ಟಲೆ ಅಲೆದು ನೀರು ತರುವಂತಾಗಿದೆ. ಇದರಿಂದ ಜನರ ಜೀವನ ತೀವ್ರ ಅಸ್ತ ವ್ಯಸ್ತಗೊಂಡಿದೆ. ಹಟ್ಟಿ ಪಟ್ಟಣ ಪಂಚಾಯಿತಿಗೆ ನೂರಾರು ಕೋಟಿ ರೂಪಾಯಿ ಅನುದಾನ ಬಂದರೂ ನೀರು ಕೊಡಲು ವಿಫಲವಾಗಿದೆ” ಎಂದು ತೀವ್ರವಾಗಿ ಖಂಡಿಸಿದರು.
“ಗ್ರಾಮದ ಹಲವು ಬಡಾವಣೆಗಳಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿ, ಸ್ವಚ್ಛತೆ, ಬೀದಿದೀಪ ಅಳವಡಿಕೆ, ಕುಡಿಯುವ ನೀರಿನ ಸಮಸ್ಯೆಗಳು ತಾರಕಕ್ಕೇರಿವೆ. ಗ್ರಾಮದಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ಬರುತ್ತದೆ. ಕೆಲವೊಮ್ಮೆ ಮೂರು ನಾಲ್ಕು ತಿಂಗಳವರಗೆ ಕುಡಿಯುವ ನೀರು ಬರುವುದಿಲ್ಲ. ನೀರಿಗಾಗಿ ಪರದಾಡುವಂತಾಗಿದ್ದು, ಬೋರ್‌ವೆಲ್ ಇದ್ದ ಕಡೆ ಹೋಗಿ ನೀರು ತುಂಬಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 10,000 ಮಂದು ಜನಸಂಖ್ಯೆ ಇರುವ ಹಟ್ಟಿ ಗ್ರಾಮದಲ್ಲಿ ಸಮಸ್ಯೆಗಳು ಮಿತಿ ಮೀರಿವೆ” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ ಬಾನ್ ಠಾಕೂರ್ ಮಾತನಾಡಿ, “ಹಟ್ಟಿ ಪಟ್ಟಣದ ಜತ್ತಿ ಕಾಲೋನಿ ಕಡೆ ಹೋಗುವ ರಸ್ತೆ ತುಂಬಾ ಗುಂಡಿ ಬಿದ್ದಿವೆ. ಪ್ರಸ್ತುತ ಕಾಕಾ ನಗರದಲ್ಲಿ ನಡೆದ ಬ್ರಿಡ್ಜ್ ಕಾಮಗಾರಿ ಎಸ್ಟಿಮೇಟ್‌ನಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಇದ್ದರೂ ಕೂಡ ರಸ್ತೆ ನಿರ್ಮಾಣವಾಗಿಲ್ಲ. ಕೂಡಲೇ ರಸ್ತೆಯನ್ನು ನಿರ್ಮಾಣ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
“ಹಟ್ಟಿ ಪಟ್ಟಣ ಮತ್ತು ರಸ್ತೆಗಳು ಕೋಳಿ ಪುಚ್ಚ, ಪ್ಲಾಸ್ಟಿಕ್ ಸೇರಿದಂತೆ ಇತರೆ ವಸ್ತುಗಳಿಂದ ಮಲೀನವಾಗಿದ್ದು, ಕೂಡಲೇ ಈ ಕಸ ವಿಲೇವಾರಿ ಘಟಕ ನಿರ್ಮಿಸಿ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ನೈರ್ಮಲ್ಯ ಕಾಪಾಡಿ ಜನರ ಆರೋಗ್ಯ ಕಾಪಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಹಟ್ಟಿಯಲ್ಲಿ ಸತ್ತ ಹೆಣಗಳನ್ನು ಹೂಳಲು ಸ್ಮಶಾನ ಭೂಮಿ ಇಲ್ಲದಂತಾಗಿದೆ. ಕೂಡಲೇ ಭೂಮಿಯನ್ನು ಖರೀದಿಸಿ ಸ್ಮಶಾನ ನಿರ್ಮಿಸಬೇಕು” ಎಂದು ಆಗ್ರಹಿಸಿದರು.
“ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು ಸಂಪೂರ್ಣವಾಗಿ ಇದಕ್ಕೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ವಿದ್ಯಾರ್ಥಿ ಯುವಜನರ ಭವಿಷ್ಯ ರೂಪಿಸಲು ಉತ್ತಮ ವ್ಯವಸ್ಥೆ ಇರುವ ವ್ಯವಸ್ಥಿತವಾದ ಗ್ರಂಥಾಲಯವನ್ನು ನಿರ್ಮಿಸಬೇಕು. ಹಟ್ಟಿ ಪಟ್ಟಣದಲ್ಲಿ ಎಲ್ಲ ಸಿಎ ಸೈಟುಗಳನ್ನು ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕ ಸೌಲಭ್ಯಕ್ಕೆ ಅನುಕೂಲವಾಗುವ ಗ್ರಂಥಾಲಯ, ಪಾರ್ಕ್, ಭವನಗಳನ್ನು ನಿರ್ಮಿಸಬೇಕು ಹಾಗೂ ಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು. 15 ದಿನಗಳ ಒಳಗಾಗಿ ಎಲ್ಲ ಬೇಡಿಕೆಗಳ ಕುರಿತಂತೆ ಲಿಖಿತವಾಗಿ ಉತ್ತರ ನೀಡಬೇಕು. ನಿರ್ಲಕ್ಷ್ಯ ತೋರಿದರೆ ಹಟ್ಟಿ ಪಟ್ಟಣದ ಹಳೆ ಬಸ್ ನಿಲ್ದಾಣದ ೆದುರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದು” ಎಂದು ಜಂಟಿ ಸಂಘಟನೆಗಳ ಸಂಘಟನಾಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರುಗಳಾದ ಅಮರೇಶ ಗುರಿಕಾರ, ಮಹ್ಮದ್ ಹನೀಫ್, ಹಸನತ ಅಲಿ, ಬಾಬುಸಾಗರ್, ಅಲ್ಲಾಭಕ್ಷ ಅಂಜು ಕುಮಾರ್, ವೆಂಕಟೇಶ ಮೇದಿನಾಪೂರು, ಆಟೋ ಚಾಲಕರ ಸಂಘದ ಅಧ್ಯಕ್ಷ ಮಹಿಬೂಬ್ ಖುರೇಶಿ ಕಾರ್ಯದರ್ಶಿ ಬಸವಲಿಂಗ, ಕೆಪಿಆರ್‌ಎಸ್ ಮುಖಂಡರುಗಳಾದ ನಿಂಗಪ್ಪ ಎಂ, ವೆಂಕೋಬ ಕಲ್ಲು ಸೇರಿದಂತೆ ಇತರರು ಇದ್ದರು.