ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರೆ ಕೊಡಲಾಗಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ರಾಯಚೂರಿನಲ್ಲಿ ಹಲವು ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಯಚೂರು ಜಿಲ್ಲಾಧಿಕಾರಿಗೆ ಹಕ್ಕೊತ್ಥಾಯ ಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಪ್ರತಿಭಟನೆ ನಡೆಸಿದ್ದು, “ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು, ಜಲಾಶಯಗಳು ಬರಿದಾಗಿವೆ. ಸಂಕಷ್ಟದ ಸಮಯದಲ್ಲಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ವಸ್ತುಸ್ಥಿತಿ ಅರಿಯದೇ ನೀಡಿರುವ ತೀರ್ಮಾನ ರದ್ದುಗೊಳಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೀರೇಶ ಹೀರಾ, ಜಿಲ್ಲಾ ಸಂಚಾಲಕ ವಿರೇಶರೆಡ್ಡಿ, ತಾಲೂಕ ಅಧ್ಯಕ್ಷ ವೆಂಕಟರೆಡ್ಡಿ, ತುಳಜಾರಾಮ, ಶ್ಯಾಮ ಮಹೇಂದ್ರಕರ್, ರಾಜು ಭವಾನಿ, ವಿರುಪನಗೌಡ, ರಮೇಶ ವನಮಾಲಿ, ಎಂ.ಈರಣ್ಣ, ರುದ್ರಗೌಡ, ರುದ್ರಪ್ಪ, ಶಾಲಂ ಟೇಲರ್, ನರಸಿಂಗರಾವ್, ಅಮರೇಶ ಮಹೇಂದ್ರಕರ, ನಾಗೇಶ ಪತಂಗೆ, ಶಿವಶಂಕರ ಹೀರೆಮಠ ಸೇರಿದಂತೆ ಇತರರು ಇದ್ದರು.
ಆಮ್ ಅದ್ಮಿ ಪಕ್ಷದ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಆಮ್ ಅದ್ಮಿ ಪಕ್ಷದ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಬಂದ್ | ಚಿಕ್ಕಬಳ್ಳಾಪುರ: ತಲೆ ಬೋಳಿಸಿಕೊಂಡು ಪ್ರತಿಭಟನೆ
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ಈ ಹಿಂದೆ ಸಂಸದರಾಗಿದ್ದ ಅನಂತಕುಮಾರ, ವೆಂಕಯ್ಯ ನಾಯ್ಡು ಇವರು ಕನ್ನಡಿಗರ ಪರವಾಗಿ ಧ್ವನಿಯೆತ್ತಿದಂತೆ ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಧ್ವನಿಯೆತ್ತಿ ನ್ಯಾಯ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶಕುಮಾರ, ನುಸ್ರತ್ ಅಲಿ, ಖಾದರ್ ಸೇರಿದಂತೆ ಇತರರು ಇದ್ದರು.