ಕವಿತಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ‘ಡಿ’ ಗ್ರೂಪ್ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ವೇತನ ಪಾವತಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಅವಿಭಜಿತ ಮಾನ್ವಿ ತಾಲೂಕು ವ್ಯಾಪ್ತಿಯ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 30ಕ್ಕೂ ಹೆಚ್ಚು ಕಾರ್ಮಿಕರಿಗೆ ವೇತನ ಸಿಗದೇ ಕಂಗಾಲಾಗಿದ್ದಾರೆ. ಮನೆ ನಿರ್ವಹಣೆ, ಮಕ್ಕಳ ಓದಿನ ಖರ್ಚು ಸೇರಿದಂತೆ ವಿವಿಧ ರೀತಿಯ ವೆಚ್ಚಗಳನ್ನು ಭರಿಸಲಾಗದೆ ಪರದಾಡುತ್ತಿದ್ದಾರೆ.
ಕವಿತಾಳ ಆಸ್ಪತ್ರೆಯಲ್ಲಿ ಗ್ರೂಪ್ ‘ಡಿ’ ಮತ್ತು ನಾನ್ ಕ್ಲಿನಿಕ್ ಕಾರ್ಮಿಕರಾಗಿ ಏಳು ಮಂದಿ ಕೆಲಸ ಮಾಡುತ್ತಿದ್ದೇವೆ. ನಮಗೆ ತಿಂಗಳಿಗೆ 11,500 ರೂ. ವೇತನವಿದೆ. ಅದನ್ನೂ ಐದು ತಿಂಗಳಿಂದ ಕೊಟ್ಟಿಲ್ಲ. ಹೀಗಾದರೆ ನಾವು ಜೀವನ ನಡೆಸುವುದಾದರೂ ಹೇಗೆ? ಈಗ ಮೂರು ತಿಂಗಳಿಂದ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರ್ಮಿಕರೊಬ್ಬರು ಮಾದ್ಯಮದವರ ಎದುರು ಅಳಲು ತೋಡಿಕೊಂಡಿದ್ದಾರೆ.
ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ಎರಡು ಜನ ಮಕ್ಕಳು ಶಾಲೆಗೆ ಹೋಗುತ್ತಾರೆ. ಪತ್ನಿಗೆ ಆರೋಗ್ಯ ಸಮಸ್ಯೆ. ಹೀಗಾಗಿ ನನ್ನ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇದೆ. ನಮಗಿರುವುದು ಇದೊಂದೇ ಸಂಬಳ. ಬೇರೆ ಆದಾಯದ ಮೂಲಗಳಿಲ್ಲ. ಬರುವ ಸಂಬಳದಲ್ಲೇ ಪ್ರತೀ ತಿಂಗಳು ಮನೆಗೆ ದಿನಸಿ, ಅಪ್ಪ-ಅಮ್ಮನ ಔಷಧ, ಮಕ್ಕಳ ಶಿಕ್ಷಣದ ಖರ್ಚು ನಿಭಾಯಿಸಬೇಕಿದೆ. ಗುತ್ತಿಗೆ ಏಜೆನ್ಸಿ ಬದಲಾವಣೆ ಹಿನ್ನೆಲೆಯಲ್ಲಿ ನಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಹಿಂದೆ ಕೆಲಸ ಮಾಡಿದ ಐದು ತಿಂಗಳ ವೇತನವಾದರೂ ಪಾವತಿಸಿದರೆ ಅನುಕೂಲವಾಗುತ್ತದೆ ಎಂದು ಕಾರ್ಮಿಕರು ಹೇಳುತ್ತಾರೆ.
ಪ್ರತಿನಿತ್ಯ 200ಕ್ಕೂ ಅಧಿಕ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೈಗೊಳ್ಳಲು ಮತ್ತು ರೋಗಿಗಳನ್ನು ನಿಭಾಯಿಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು.
ಸಂಬಂಧ ಪಟ್ಟ ವೈದ್ಯರು ಆದಷ್ಟು ಬೇಗ ನಮ್ಮ ಸಮಸ್ಯೆ ಬಗೆ ಹರಿಸಿ, ವೇತನ ಪಾವತಿಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತಿದ್ದಾರೆ.