ರಾಯಚೂರು ನಗರದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಭತ್ತ ಮಳೆಯ ನೀರಿನಿಂದ ತೋಯ್ದು ಲಕ್ಷಾಂತರ ಮೌಲ್ಯದ ಮಾಲು ಹಾನಿಯಾಗಿದೆ.
ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ರಾತ್ರಿಯಿಡೀ ಸುರಿದ ಮಳೆಯಿಂದ ತಂಪು ವಾತಾವರಣ ಆಹ್ಲಾದ ತಂದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವ ಘಟನೆ ನಡೆದಿದೆ.
“ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ರೈತರ ಭತ್ತ ನೀರುಪಾಲಾಗಿದೆ. ಕೆಲ ವರ್ತಕರು ಖರೀದಿಸಿದ್ದ ಭತ್ತವೂ ನೀರನಲ್ಲಿ ತೆಲುವಂತಾಗಿದೆ. ಸಾಯಿ ಕೃಪಾ ಟ್ರೇಡರ್ಸ್‌ಗೆ ಸೇರಿದ ನಾಲ್ಕು ನೂರು ಚೀಲ ನೀರಿನಲ್ಲಿ ಆವೃತ್ತವಾಗಿದೆ. ಎಪಿಎಂಸಿಯಲ್ಲಿ ರೈತರ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿ ಪ್ರತಿಬಾರಿಯೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ. ರೈತರಿಂದ ಕರ ಸಂಗ್ರಹಿಸುವ ಎಪಿಎಂಸಿ ರೈತರ ಮಾಲಿಗೆ ರಕ್ಷಣೆ ನೀಡುತ್ತಿಲ್ಲ. ಮಳೆಯಿಂದ ಉಂಟಾಗಿರುವ ಹಾನಿಗೆ ಒಳಗಾಗಿರುವ ಸಂತ್ರಸ್ಥ ರೈತರಿಗೆ ಪರಿಹಾರ ಒದಗಿಸಬೇಕು” ಎಂದು ರೈತರು ಒತ್ತಾಯಿಸಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ರೈತರ ಜಮೀನಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಚಂದ್ರಬಂಡಾ, ಕಡಗಂದೊಡ್ಡಿ, ಸಿಂಗನೋಡಿ, ಸಗಮಕುಂಟಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬೆಳೆ ನಷ್ಟವಾಗಿದೆ. ಮಾವು, ಮೋಸಂಬಿ, ಪಪ್ಪಾಯಿ, ದಾಳಿಂಬೆ ಫಸಲು ಗಾಳಿಗೆ ನೆಲಕ್ಕುರುಳಿವೆ.
ರಾತ್ರಿ ನಿದ್ದೆಯಲ್ಲಿದ್ದ ಜನರಿಗೆ ಏಕಾಏಕಿ ಜೋರಾದ ಮಳೆಯಿಂದಾಗಿ ಜಾಗರಣೆ ಮಾಡುವಂತಾಗಿದೆ. ಮಳೆಯಿಂದ ಆಶ್ರಯ ಪಡೆಯಲು ಜನರು ಬೇರೆ ಸ್ಥಳಕ್ಕೆ ತೆರಳುವಂತಾಗಿದೆ.
ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನರು ಪರತಪಿಸುವಂತಾಯಿತು. ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜನರಿಗೆ ಮೊದಲ ಮಳೆಯೇ ಸಮಸ್ಯೆಯನ್ನು ಸೃಷ್ಟಿಸಲು ಕಾರಣವಾಯಿತು.
ರಾಯಚೂರು ತಾಲೂಕಾದ್ಯಂತ ರಾತ್ರಿಯಿಡೀ ಬಾರಿ ಮಳೆಯಾಗಿದ್ದು, ಯರಗೇರಾ ಹೋಬಳಿಯಲ್ಲಿ 136 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಯರಗೇರಾ ಹೋಬಳಿ ವ್ಯಾಪ್ತಿಯಲ್ಲಿ 136 ಮಿಮೀ ಮಳೆಯಾಗಿ ಮೊದಲ ಮಳೆ ದಾಖಲೆ ನಿರ್ಮಿಸಿದೆ. ಇನ್ನು ಸಿಂಗನೋಡಿ ವ್ಯಾಪ್ತಿಯಲ್ಲಿ 52.5 ಮಿಮೀ ಅತಿ ಕಡಿಮೆ ಮಳೆಯಾಗಿದೆ. ಮಿಟ್ಟಿ ಮಲ್ಕಾಪೂರದಲ್ಲಿ 132 ಮಿಮೀ ಮಳೆಯಾಗಿದೆ. ಕಲಮಲ ಹೋಬಳಿಯಲ್ಲಿ, 115 ಮಿಮೀ ಮಳೆಯಾಗಿದೆ. ಬೀಜನಗೇರಾದಲ್ಲಿ 111ಮೀಮೀ ಮಳೆಯಾಗಿದೆ. ಶಾಖವಾದಿಯಲ್ಲಿ 105.5 ಮಿಮೀ ಮಳೆಯಾಗಿದೆ. ಮರ್ಚೆಟಾಳ ವ್ಯಾಪ್ತಿಯಲ್ಲಿ 102.5 ಮಿಮೀ ಮಳೆಯಾಗಿದೆ. ಪೂರ್ತಿಪ್ಲಿಯಲ್ಲಿ 89ಮಿಮೀ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ: ನ್ಯಾ ಎ ಅರುಣ ಕುಮಾರಿ
ಕಾಡ್ಲೂರು ವ್ಯಾಪ್ತಿಯಲ್ಲಿ 87ಮಿಮೀ ಮಳೆಯಾಗಿದೆ. ಯಾಪಲದಿನ್ನಿ ವ್ಯಾಪ್ತಿಯಲ್ಲಿ 87
ಮಿಮೀ ಮಳೆಯಾಗಿದೆ. ಲಿಂಗನಖಾನದೊಡ್ಡಿಯಲ್ಲಿ 84ಮಿಮೀನಷ್ಟು ಮಳೆಯಾಗಿದೆ. ಚಂದ್ರಬಂಡಾ ವ್ಯಾಪ್ತಿಯಲ್ಲಿ 64 ಮಿಮೀ ಮಳೆಯಾಗಿದೆ. ಚಿಕ್ಕಸೂಗುರು ವ್ಯಾಪ್ತಿಯಲ್ಲಿ 63.5 ಮಿಮೀ ಮಳೆಯಾಗಿದೆ.
ಗಾಣದಾಳ ವ್ಯಾಪ್ತಿಯಲ್ಲಿ 63.5 ಮಿಮೀ ಮಳೆಯಾಗಿದೆ. ಇಡಪನೂರಿನಲ್ಲಿ 59 ಮಿಮೀ ಮಳೆಯಾಗಿದೆ. ಸಿಂಗನೋಡಿ ವ್ಯಾಪ್ತಿಯಲ್ಲಿ 52.5 ಮಿಮೀ ಮಳೆ ದಾಖಲಾಗಿದೆ.
ವರದಿ : ಹಫೀಜುಲ್ಲ
