ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಸಮೀಪ ಗುರುವಾರ ನಡೆದ ಸಾರಿಗೆ ಬಸ್ ಹಾಗೂ ಲೊಯೊಲಾ ಶಾಲೆಯ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟ ರಾಯಚೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಾರಿಗೆ ಬಸ್ ಹಾಗೂ ಶಾಲಾ ವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಮೃತ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಿದ್ದಾರೆ. ಕನಿಷ್ಠ ₹10 ಲಕ್ಷ ಸರ್ಕಾರ ಹಾಗೂ ₹10 ಲಕ್ಷ ಕೆಎಸ್ಆರ್‌ಟಿಸಿ ಸೇರಿ ಒಟ್ಟು 20 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಶಾಲಾಡಳಿತ ಮಂಡಳಿಯಿಂದ ಗಾಯಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಲಾ ₹10 ಲಕ್ಷ ನೀಡಬೇಕು. ಶಾಶ್ವತ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಸರ್ಕಾರದಿಂದ ₹5, ಲಕ್ಷ ಆಡಳಿತ ಮಂಡಳಿ ₹5 ಲಕ್ಷ ಪರಿಹಾರ ನೀಡಬೇಕು. ಶಾಲಾ ವಾಹನ ಚಾಲಕರಿಗೆ ಕನಿಷ್ಠ 5ರಿಂದ 10 ವರ್ಷ ಅನುಭವ ಹೊಂದಿದವರನ್ನು ಮಾತ್ರ ನೇಮಿಸಿಕೊಳ್ಳಬೇಕು. ಪ್ರಮುಖ ರಸ್ತೆಗಳಲ್ಲಿ, ಹೆದ್ದಾರಿಗಳಲ್ಲಿನ ಗುಂಡಿಗಳನ್ನು ಮುಚ್ಚಿ ತಕ್ಷಣವೇ ದುರಸ್ತಿಗೊಳಿಲು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ
ಜಿಲ್ಲಾ ಘಟಕದ ಅಧ್ಯಕ್ಷ ಜಿ.ವೆಂಕಟೇಶ, ಉಪಾಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ರಘು ಈಟೇಕರ್, ಲಕ್ಷ್ಮೀ ನಾರಾಯಣ ಶೆಟ್ಟಿ, ಅಂಬಾಜಿ ರಾವ್, ಶಾಂತಕುಮಾರ ಪಾಲ್ಗೊಂಡಿದ್ದರು.
