ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಜಾಪೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ರಾಜ್ಯ ಮಹಿಳಾ ಒಕ್ಕೂಟದ ವತಿಯಿಂದ ಸಹಾಯಕ ಆಯುಕ್ತ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ಧರಣಿ ಸತ್ಯಾಗ್ರಹವು ಐದನೇ ದಿನಕ್ಕೆ ಕಾಲಿಟ್ಟಿದ್ದು, ನಿರಂತರ ಸುರಿಯುವ ಜಿಟಿ ಜಿಟಿ ಮಳೆಯಲ್ಲಿಯೂ ಪ್ರತಿಭಟನೆ ಮುಂದುವರೆದಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತಗೊಡಿದ್ದು, ಕೂಡಲೆ ಗ್ರಾಮ ಪಂಚಾಯತಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ನರೇಗಾ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪಿಡಿಓ ಅಧಿಕಾರಿ ಶೋಭಾರಾಣಿ ತಮ್ಮ ಪತಿಯ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗಿತ್ತು. ಇದರಿಂದ ಎಚ್ಚೆತ್ತ ಪಿಡಿಓ ಶೋಭಾರಾಣಿ ಸರ್ಕಾರಕ್ಕೆ ಹಣ ಮರುಪಾವತಿ ಮಾಡಿದ್ದಾರೆ. ಆದರೆ, ಪತಿಯ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದು ಸಾಬೀತಾದರೂ ಕ್ರಮಕೈಗೊಳ್ಳಲಿಲ್ಲ. ಕೂಡಲೇ ಅವರ ವಿರುದ್ಧ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದಿರುವದು ಖಂಡನೀಯ ಎಂದರು.
ಇನ್ನು ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿರುವ ಪರಿಣಾಮ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೊನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮನಾಯಕನ ದೊಡ್ಡಿಗೆ ಕುಡಿಯುವ ನೀರಿಗಾಗಿ ತಾಲೂಕು ಪಂಚಾಯತಿ ಅನುದಾನದಲ್ಲಿ ಕೊಳವೆಬಾವಿ ಹಾಕಿಸಿದ್ದು, ದೊಡ್ಡಿಗೆ 24 ಗಂಟೆ ವಿದ್ಯುತ್ ಸಂಪರ್ಕವಿಲ್ಲ. ದೊಡ್ಡಿಯಲ್ಲಿರುವ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿದ್ದಾರೆ. ಕೂಡಲೇ ಮೀಟರ್ ಅಳವಡಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ದೊಡ್ಡಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ ಯೋಜನಾಧಿಕಾರಿ ಶರಣಬಸಪ್ಪ ಧರಣಿ ನಿರತರೊಡನೆ ಮಾತುಕತೆ ನಡೆಸಿದರು. ಆದರೆ ಅವರ ಮಾತುಗಳಲ್ಲಿ ಯಾವುದೆ ಸ್ಪಷ್ಟತೆ ಇರದ ಕಾರಣ ಧರಣಿ ಮುಂದುವರೆಸಲಾಯಿತು ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗಾಗಿ ಹೋರಾಟಗಾರರಿಂದ ಡಿಸಿ ಕಚೇರಿ ಮುತ್ತಿಗೆ ಯತ್ನ; ಬಂಧನ, ಬಿಡುಗಡೆ
ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡ ಗುಂಡಪ್ಪ ಯರಡೋಣ. ಮಂಜು, ಹನುಮಂತ, ಕುಬೇರು ಕುಪೆಗುಡ್ಡ, ದುರ್ಗಪ್ಪ, ಬಸವಂತಪ್ಪ, ಯಲ್ಲಪ್ಪ, ಶರಣಪ್ಪ ಹಾಗೂ ಶರಣಮ್ಮ, ಇತರರು ಇದ್ದರು.
