ರಾಯಚೂರು ಜಿಲ್ಲೆಯಲ್ಲಿ ಪಿಡಿಓ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ವಿಳಂಬ ಮಾಡಿ ಪ್ರಶ್ನೆಪತ್ರಿಕೆ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ 12 ಜನ ಅಭ್ಯರ್ಥಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಸಿಂಧನೂರು ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ವಿಳಂಬವಾಗಿ ನೀಡಿದ್ದನ್ನು ಖಂಡಿಸಿ ಪರೀಕ್ಷಾ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿ ಪೇಪರ್ ಲೀಕ್ ಆಗಿದೆ ಎಂದು ಆರೋಪಿಸಿದ್ದರು.
ಈಗ ಪ್ರತಿಭಟನೆ ನಡೆಸಿದವರ ಮೇಲೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಂಧನೂರು ಪಟ್ಟಣದ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಅವ್ಯವಸ್ಥೆ ಕುರಿತು ಪರೀಕ್ಷಾರ್ಥಿಗಳು ವಿರೋಧಿಸಿ ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಪರೀಕ್ಷಾ ಪ್ರಾಧಿಕಾರದ ಎಡವಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನು ಓದಿದ್ದೀರಾ? ಮಂಗಳೂರು | ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
ಪರೀಕ್ಷಾ ಕೇಂದ್ರ ಮೇಲ್ವಿಚಾರಕ ಬಸವರಾಜ ತಡಕಲ್ ನೀಡಿದ ದೂರಿನ ಮೇರೆಗೆಪ್ರತಿಭಟನೆ ನಡೆಸಿದವರ ವಿರುದ್ಧ ದೂರು ದಾಖಲಾಗಿದೆ. ಅಭ್ಯರ್ಥಿಗಳಿಗೆ ಆಗಿರುವ ತೊಂದರೆ ನಿವಾರಿಸಬೇಕಾದವರೇ, ಈಗ ಪ್ರಕರಣ ದಾಖಲಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ದೂರು ದಾಖಲಿಸಿದವರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಕೂಡ ಕೇಸು ದಾಖಲಿಸಲು ಅಭ್ಯಥಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
