ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳು ಮತ್ತು ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು, ಪಾದಚಾರಿಗಳಿಗೆ ಇದರಿಂದ ತುಂಬಾ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರು ಕ್ಯಾರೇ ಎನ್ನುತ್ತಿಲ್ಲಾ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಎರಡು ದಿನಗಳ ಹಿಂದೆ ನಗರದ ಗೀತಾ ಕೆಫೆ ಹತ್ತಿರ ಶಾಪಿಂಗ್ ಮಾಡುವ ವೇಳೆ ಹುಚ್ಚು ನಾಯಿಯೊಂದು ಪೊಲೀಸ್ ಅಧಿಕಾರಿಯೋರ್ವರ ಪುತ್ರನ ಮೇಲೆ ರಸ್ತೆಯಲ್ಲಿ ದಾಳಿ ನಡೆಸಿ ಗಂಭೀರವಾಗಿ ಕಡಿದು ಗಾಯಗೊಳಿಸಿದ ಘಟನೆಯು ಸಿಂಧನೂರು ಜನತೆಯನ್ನು ಭಯಗೊಳಿಸಿದೆ. ಇದೊಂದು ಘಟನೆ ಮಾತ್ರವಲ್ಲ, ನಗರದ ಪ್ರತಿ ವಾರ್ಡ್, ಬಜಾರ್‍ಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೈಕ್ ಸವಾರರು, ಪಾದಚಾರಿಗಳು ಸಿಂಧನೂರಿಗೆ ಬರಲು ಹಿಂದೇಟು ಹಾಕುವಂತಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಜೀವಕ್ಕೆ ಮಾರಕವಾದ ಘಟನೆ ನಡೆಯುತ್ತಿದೆ. ಆದರೆ, ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕಾದ ನಗರಸಭೆಯವರು ಮೌನವಹಿಸಿ, ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕಳೆದ ಒಂದು ತಿಂಗಳದ ಹಿಂದೆ ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತಾದರೂ, ನಾಯಿಗಳು ಮಾತ್ರ ಸಿಂಧನೂರು ಪಟ್ಟಣದ ತುಂಬಾ ಓಡಾಟ ಮಾಡುತ್ತಲೇ ಇವೆ. ನಾಯಿಗಳ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವೈಫಲ್ಯಕ್ಕೀಡಾಗಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬೀದಿ ನಾಯಿಗಳು ಮಾತ್ರವಲ್ಲದೇ, ಬಿಡಾಡಿ ದನಗಳ ಹಾವಳಿ ಕೂಡ ಹೆಚ್ಚಾಗಿದ್ದು, ರಸ್ತೆ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ. ಜೋರಾಗಿ ಬರುವ ವಾಹನಗಳಿಗೆ ಸಿಲುಕಿ ಈ ಹಿಂದೆ ಹಸುಗಳು ಸಾವನ್ನಪ್ಪಿದ್ದವು. ಕಾಲುಗಳು ಮುರಿದುಕೊಂಡ ಘಟನೆಗಳು ಕೂಡ ನಡೆದಿದೆ. ಆದರೂ, ಸೂಕ್ತ ಕ್ರಮ ಕೈಗೊಳುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ನಗರಸಭೆಯವರು ಬೀದಿ ನಾಯಿಗಳನ್ನು ಹಾಗೂ ಬಿಡಾಡಿ ದನಗಳನ್ನು ಕೂಡಲೇ ನಿಯಂತ್ರಣಗೊಳಿಸಲಿಕ್ಕೆ ಮುಂದಾಗಬೇಕೆಂದು ಪುರಸಭೆಗೆ ದೂರು ನೀಡಿದಾಗ, ಅವರು ಧ್ವನಿ ವರ್ಧಕ ಬೀಡಾಡಿ ದನಗಳು ಇದ್ದರೆ ಅವುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದು ಹೇಳಿದ್ದರೇ ಹೊರತು, ಹೇಳಿದಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ
ಕೂಡಲೇ ಸಂಬಂಧಿಸಿದ ನಗರಸಭೆಯವರು ಬೀದಿ ನಾಯಿಗಳನ್ನು ಹಾಗೂ ಬೀಡಾಡಿ ದನಗಳನ್ನು ಕೂಡಲೇ ನಿಯಂತ್ರಣಗೊಳಿಸಲಿಕ್ಕೆ ಮುಂದಾಗಬೇಕು ಎಂಬುದು ನಮ್ಮ ಸಂಘಟನೆಯ ಒತ್ತಾಯವಾಗಿದೆ. ಇಲ್ಲದೇ, ಹೋದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾದ ಸ್ಥಿತಿ ಬರಬೇಕಾಗುತ್ತದೆಂದು ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರ ಅವರಿಗೆ ಆಗ್ರಹಿಸುತ್ತಿದ್ದೇವೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ ಎಚ್ಚರಿಕೆ ನೀಡಿದ್ದಾರೆ.