ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಮೇಲೆ ವ್ಯಕ್ತಿಯೋರ್ವ ಮಚ್ಚಿನಿಂದ ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಚೆನ್ನವೀರಮ್ಮ ಹಲ್ಲೆ ಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ.ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚೆನ್ನವೀರಮ್ಮ ಎಂದಿನಂತೆ ಸೋಮವಾರ ಬೆಳಗ್ಗೆ ಶಾಲೆಗೆ ಹೋಗುವಾಗ ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಳ್ಳಲು ಪಿಡಬ್ಲ್ಯೂಡಿ ಕ್ಯಾಂಪಿನ ಬಳಿ ಇರುವ ಪೆಟ್ರೋಲ್ ಬಂಕ್ ಗೆ ಹೋಗಿದ್ದಾರೆ.ಆಕೆಯನ್ನು ಹಿಂಬಾಲಿಸಿಕೊಂಡ ಬಂದ ಆರೋಪಿ ವಿಜಯಕುಮಾರ ಏಕಾಏಕಿ ಮಚ್ಚಿನಿಂದ ಕತ್ತು ಕತ್ತರಿಸಲು ಮುಂದಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊಲದಲ್ಲಿ ದೇವಸ್ಥಾನ ಪೂಜೆಗೆ ತೆರಳಿದ್ದ ಮಗ ಸಿಡಿಲಿಗೆ ಬಲಿ; ತಾಯಿ ಗಂಭೀರ ಗಾಯ
ಆಕೆಯ ಮೇಲೆ ಹಲ್ಲೆಗೆ ಮುಂದಾದಾಗ ತಲೆಗೆ ಪೆಟ್ಟಾಗಿದೆ ತಕ್ಷಣ ಇದನ್ನು ಕಂಡು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಆತನನ್ನು ಹಿಡಿದು ಆತನ ಕೈಯಲ್ಲಿದ್ದ ಮಚ್ಚು ಕಿತ್ತಿಕೊಳ್ಳಲು ಮುಂದಾಗಿದ್ದಾರೆ. ಸಿಬ್ಬಂದಿಯ ಕೈಗೂ ಕೂಡ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿದೆ. ಜನಸೇರುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳೀಯ ಜನರು ಕೂಡಲೇ ಚೆನ್ನವೀರಮ್ಮ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ವಿಜಯಕುಮಾರರನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ:
ಕೊಲೆಗೆ ಯತ್ನಿಸಿದ ವಿಜಯಕುಮಾರ 2013 ರಲ್ಲಿ ಚೆನ್ನವೀರಮ್ಮ ಅವರ ನಿವಾಸದಲ್ಲಿ ಬಾಡಿಗೆಗೆ ಇದ್ದನು. ವೈಯಕ್ತಿಕ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೂಡಲೇ ಆತನನ್ನು ಮನೆಬಿಡಿಸಿ, ಆತನ ವಿರುದ್ಧ ದೂರು ದಾಖಲಿಸಿದ್ದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ವಿಜಯಕುಮಾರ ಸೋಮವಾರ ಏಕಾಏಕಿ ಚೆನ್ನವೀರಮ್ಮ ಅವರ ಮೇಲೆ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
