ಸುಪ್ರಿಂಕೋರ್ಟಿನ ನ್ಯಾಯಮೂರ್ತಿ ಅರುಣ ಮಿಶ್ರಾ ನೇತೃತ್ವದ ಐದು ಮಂದಿ ನ್ಯಾಯಮೂರ್ತಿಗಳ ಪೀಠವು ಎಸ್‌ಸಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಸಮ್ಮತಿಸಿದೆ. ಪೀಠದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸುಪ್ರಿಂಕೋರ್ಟಿಗೆ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಮಿತ್ರ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲ. ಪಂಜಾಬ್‌ನಲ್ಲಿ ಒಳ ಮೀಸಲಾತಿಯನ್ನು ಚಂಡೀಗಡ ಹೈಕೋರ್ಟ್ ರದ್ದುಗೊಳಿತ್ತು. ಅದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ 2014ರಲ್ಲಿ ಸುಪ್ರಿಂಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯವು ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿತ್ತು. 2020ರಲ್ಲಿ ನ್ಯಾಯಮೂರ್ತಿ ಅರುಣ ಮಿಶ್ರಾ ನೇತೃತ್ವದ ಐದು ನ್ಯಾಯಮೂರ್ತಿ ಒಳ ಮೀಸಲಾತಿ ಜಾರಿಗೆ ಸಮ್ಮತಿ ನೀಡಿತ್ತು. ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಅರ್ಜಿಯನ್ನು ಏಳು ಮಂದಿ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿದೆ” ಎಂದು ವಿವರಿಸಿದ್ದಾರೆ.
“ಏಳು ಮಂದಿ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಯಬೇಕಿದೆ. ಒಳ ಮೀಸಲಾತಿ ಬೇಕೆನ್ನುವ ಸಂಘಟನೆಗಳು ಸುಪ್ರಿಂಕೋರ್ಟಿನಲ್ಲಿ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿ ಶಿಫಾರಸ್ಸಿನ ಮೇರೆಗೆ ಒಳ ಮೀಸಲಾತಿ ನಿಗಧಿಗೊಳಿಸಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಆದರೆ, ಸಮಿತಿ ನೀಡಿರುವ ದತ್ತಾಂಶ ಪೂರಕವಾಗಿಲ್ಲ” ಎಂದು ಹೇಳಿದ್ದಾರೆ.
“ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರ ಅಂಗೀಕರಿಸಿಲ್ಲ. ನೀಡಿರುವ ಅಂಕಿ ಅಂಶಗಳು ಪೂರಕವಾಗಿಲ್ಲದೇ ಇರುವುದರಿಂದ ಸಮಿತಿ ಶಿಫಾರಸ್ಸು ಮಾನ್ಯ ಆಗುವದಿಲ್ಲ. ಬಿಜೆಪಿ ಸರ್ಕಾರವೇ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ರದ್ದುಗೊಳಿಸಿರುವ ಶಿಫಾರಸ್ಸನ್ನು ಈಗಾಗಲೇ ಸುಪ್ರಿಂಕೋರ್ಟ ರದ್ದುಗೊಳಸಿದೆ. ಅದೇ ಮಾದರಿಯಲ್ಲಿ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿ ಶಿಫಾರಸ್ಸು ಕೂಡ ರದ್ದುಗೊಳ್ಳುತ್ತದೆ” ಎಂದರು.