ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವುದನ್ನು ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ʼರಾಮಮಂದಿರ ಉದ್ಘಾಟನೆಗೆ ಮೋದಿಯವರು ಹೋಗಬಾರದುʼ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
“ಭಾರತ ಒಂದು ಸ್ವಾತಂತ್ರ್ಯ, ಸಾರ್ವಭೌಮ ಜಾತ್ಯತೀತ, ಸಮಾಜವಾದಿ ಆಶಯವನ್ನು ಹೊಂದಿರುವಂತಹ ದೇಶವಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರಗಳು ಒಂದು ಧರ್ಮದ ವಕಾಲತ್ತು ವಹಿಸುವುದು ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಈಗಾಗಲೇ ದೇಶಾದ್ಯಂತ ನಿರುದ್ಯೋಗ, ಹಸಿವು, ಬಡತನ, ಬೆಂಬಲ ಬೆಲೆಯ ಕೊರತೆ, ಆರೋಗ್ಯದ ಸಮಸ್ಯೆ ಹೀಗೆ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನತೆಯ ನೆರವಿಗೆ ಬಾರದೆ ಜನರಿಂದ ಸಂಗ್ರಹಿಸಲ್ಪಟ್ಟ ತೆರಿಗೆಯ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮಂದಿರ ಕಟ್ಟುವುದಕ್ಕೆ ಬಳಸುವುದೂ ಕೂಡ ಸಂವಿಧಾನದ ಉಲ್ಲಂಘನೆಯಾಗಿದೆ” ಎಂದರು.
“ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜಾತ್ಯತೀತ ವಿರೋಧಿ, ಆದಿವಾಸಿ ವಿರೋಧಿ ಹಾಗೂ ದಲಿತ, ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ಬಂದಿದ್ದು, ದೇಶದ ಸಂಪನ್ಮೂಲಗಳನ್ನು ಹಾಗೂ ಸೇವಾ ವಲಯಗಳನ್ನು ಕಾರ್ಪೊರೇಟರ್ ಲಾಭಕ್ಕೆ ತಕ್ಕಂತೆ ಖಾಸಗೀಕರಿಸುತ್ತಾ, ದೇಶದ ಅಭಿವೃದ್ಧಿಗೆ ಮಾರಕವಾದ ನೀತಿಗಳನ್ನು ಅನುಸರಿಸುತ್ತಿದೆ. ಒಂದೆಡೆ ಬಂಡವಾಳಿಗರ ಬಂಡವಾಳ ದುಪ್ಪಟ್ಟಾಗುತ್ತಿದ್ದು, ಕೂಲಿ ಕಾರ್ಮಿಕರ ರೈತರ ಬದುಕು ಹೀನಾಯವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಟ್ಯಾಕ್ಸಿ ಲಾರಿ ಚಾಲಕರ ಕಾರ್ಮಿಕ ವಿರೋಧಿ ರಿಲಯನ್ಸ್ ಎಸ್‌ಆರ್ ಎಂಬ ಕಂಪನಿಗಳ ಪರವಾದ ವಿದೇಯಕವನ್ನು ಮಂಡಿಸುವುದರ ಮೂಲಕ ಇದೀಗ ಅಮಾಯಕ ಚಾಲಕರನ್ನು ಬಲಿಕೊಡುವ ಕೆಲಸದಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ” ಎಂದು ಆರೋಪಿಸಿದರು.
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಹಿಂದೂ ಮೂಲಭೂತವಾದವನ್ನು ಗಟ್ಟಿಗೊಳಿಸುತ್ತಾ, ರಾಷ್ಟ್ರೀಯ ಸರಕು ಸಾಗಾಣಿಕೆಯ ಖಾಸಗೀಕರಣ ಹಾಗೂ ಮುಸ್ಲಿಂ ವಿರೋಧಿ ರಾಜಕಾರಣ ಷಡ್ಯಂತ್ರವಾಗಿದೆ. ಜತೆಗೆ ಮನೆ ಮನೆಗೆ ಅಕ್ಷತೆಯ ಹೆಸರಲ್ಲಿ ಅಮಾಯಕ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಈ ತಂತ್ರಗಾರಿಕೆಯನ್ನು ಮಾಡುತ್ತಿದೆ” ಎಂದರು.
“ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಜಾರಿಯಲ್ಲಿಯೇ ಮಗ್ನವಾಗಿದ್ದು, ಸಾಮಾನ್ಯ ಜನರ ಸಮಸ್ಯೆಗಳಿಗೆ ಹಾಗೂ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡದೆ ತಮ್ಮದೇ ಪಕ್ಷದ ಕೆಲವೇ ಕೆಲವು ಮಂತ್ರಿಗಳು ಮತ್ತು ಜಾತಿವಾದಿ ಶಾಸಕರುಗಳ ನಿರ್ದೇಶನದಂತೆ ತಡೆಹಿಡಿಯಲಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಜಾರಿ ಮಾಡಬೇಕು” ಎಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಕ್ಷ ರಾಯಚೂರು ಜಿಲ್ಲಾ ಸಮಿತಿ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ರಾಮಮಂದಿರದಲ್ಲಿ ಮುಸ್ಲಿಂ ಬಾಂಧವರಿಂದ ಪೂಜೆ
ಎಂ ಡಿ ಅಮೀರ್ ಅಲಿ, ಚಿನ್ನಪ್ಪ ಕೊಟ್ರಿಕಿ, ಜಿ ಅಮರೇಶ, ಎಂ ಗಂಗಾಧರ, ಆರ್ ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಜಿ ಅಡವಿರಾವ್, ಅಜೀಜ್ ಜಾಗೀರದಾರ್, ಆದಿ ನಗನೂರು, ಸಂತೋಷ ದಿನ್ನಿ, ತಿಪ್ಪರಾಜ ಗೆಜ್ಜಲಗಟ್ಟಾ, ವೆಂಕಟೇಶ ನಾಯಕ, ಯಲ್ಲಪ್ಪ ಊಟಕನೂರು, ಗಿರಿಲಿಂಗಸ್ವಾಮಿ ಸೇರಿದಂತೆ ಬಹುತೇಕ ಕಾರ್ಯತರ್ಕರು ಇದ್ದರು.