ಕೇಂದ್ರ ವಿದ್ಯುತ್ ಕಾಯಿದೆಯಂತೆ ಹಿಂದಿನ ಬಿಜೆಪಿ ಸರ್ಕಾರವೇ ವಿದ್ಯುತ್ ದರ ಹೆಚ್ಚಿಸಿದ್ದು, ಇಂದು ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸಣ್ಣ ಕೈಗಾರಿಕೆಗಳೊಂದಿಗೆ ಕಾಂಗ್ರೆಸ್ ಸರ್ಕಾರವಿದ್ದು, ದರ ಕಡಿತದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. “ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ಅನಧಿಕೃತ, ಅಧಿಕೃತ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ. ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಡಿತಗೊಂಡಿರಬಹುದು ಅಷ್ಟೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹ ಜ್ಯೋತಿ ಎಂಬ ದೊಡ್ಡ ಯೋಜನೆ ಜಾರಿಗೊಳಿಸಿದ್ದು, 2 ಕೋಟಿ 14 ಲಕ್ಷ ಜನರಿಗೆ ಯೋಜನೆ ತಲುಪಿಸಲಾಗುತ್ತದೆ” ಎಂದರು.
“52 ಲಕ್ಷ ಮಂದಿ ಈಗಾಗಲೇ ನೋಂದಣಿ ಪಡೆದಿದ್ದಾರೆ. ಯಾವುದೇ ಸರ್ವರ್ ಸಮಸ್ಯೆಯಿಲ್ಲ. ಅರ್ಹರಿಗೆ ಯೋಜನೆ ತಲುಪಿಸಲು ಸರ್ಕಾರ ಎಲ್ಲ ರೀತಿ ಸಿದ್ದತೆಯನ್ನು ಕೈಗೊಂಡಿದೆ. ನಮ್ಮ ಸರ್ಕಾರ ಬೆಲೆ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಬೆಲೆ ಏರಿಕೆ ನಿರ್ಧರಿಸಿದ್ದು, ಈಗ ಜಾರಿಯಾಗಿದೆ. ಇದೀಗ ಅವರೇ ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಕೋರ್ಟ್ ಆದೇಶದಂತೆ 1400 ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ. ವಿದ್ಯುತ್ ನಿರ್ವಹಣೆ ವೆಚ್ಚ ಹೆಚ್ಚಳವಾಗಿದ್ದರಿಂದ ಕೇಂದ್ರ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಕೇಂದ್ರ ವಿದ್ಯುತ್ ಕಾಯಿದೆಯಂತೆ ವಿದ್ಯುತ್ ಬಿಲ್ ಹೆಚ್ಚಿಸಿರುವುದು ಬಿಜೆಪಿ ಸರ್ಕಾರ. ಇಂದು ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ಟೀಕಿಸಿದರು.
“ವೈಟಿಪಿಎಸ್ ನಿರ್ವಹಣೆಯಲ್ಲಿ ಪವರ್ ಮ್ಯಾಕ್ ಸಂಸ್ಥೆಗೆ ನೀಡಿದ್ದ ಅವಧಿ ಪೂರ್ಣಗೊಂಡಿರುವ ಕುರಿತು ಮಾಹಿತಿಯಿಲ್ಲ. ಸದ್ಯಕ್ಕೆ ಅವರಿಗೆ ನಿರ್ವಹಣೆಯನ್ನು ಮುಂದುವರೆಸುವಂತೆ ಹೇಳಿ, ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದರು.
ವಿದ್ಯುತ್ ಲೋಡ್ ಶೆಡ್ಡಿಂಗ್ ಕುರಿತಾಗಿ ಅಧಿಕಾರಿಗಳ ಸಭೆ ನಡೆಸಿ ಕಾರಣ ತಿಳಿದುಕೊಳ್ಳುವುದಾಗಿ ಹೇಳಿದರು. ವಿದ್ಯುತ್ ಬಾಕಿ ಇರುವ ಕುರಿತು ಮಾಹಿತಿ ಪಡೆಯುವದಾಗಿ ಹೇಳಿ ವಿದ್ಯುತ್ ಘಟಕ ಇರುವ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗದಂತೆ ಕ್ರಮವಹಿಸುವದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಕ್ಷ ವಿರೋಧಿಗಳನ್ನು ಹೊರಹಾಕಲು ಒತ್ತಾಯ; ಬಿಜೆಪಿ ಕಾರ್ಯಕರ್ತರ ಗಲಾಟೆ
“ವಿದ್ಯುತ್ ದರ ಏರಿಕೆ ಕುರಿತು ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಉತ್ತರಿಸುವುದಿಲ್ಲ. ಅವರೇನು ವಿದ್ಯುತ್ ಮಂತ್ರಿಯಲ್ಲ. ಅವರು ಸಚಿವರಾಗಿ ರಾಜೀನಾಮೆ ಕೊಟ್ಟವರು ಅವರಿಗೇನು ಗೊತ್ತು” ಎಂದರು.
ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಗ್ರಾಮೀಣ ಶಾಸಕ ದದ್ದಲ ಬಸನಗೌಡ, ಇಲಾಖೆ ಕಾರ್ಯದರ್ಶಿ ಗೌರವ ಗುಪ್ತಾ, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಪಂಜಕಪಾಂಡೆ ಸೇರಿ ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿಗಳು ಇದ್ದರು.