ಖಾಸಗಿ ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣದಲ್ಲಿರುವ ಗೊಂದಲಗಳ ನಿವಾರಣೆ, ವಿದ್ಯಾರ್ಥಿಗಳ ಶುಲ್ಕದ ಮೇಲೆ ಜಿಎಸ್‌ಟಿ ಹೇರಿರುವುದು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಬಸ್ ನಿಲ್ದಾಣದ ಮುಂಭಾಗದಿಂದ ಮಹಾನಗರ ಪಾಲಿಕೆ ವಲಯ ಕಚೇರಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ವಾಲ್ಕಟ್ ಮೈದಾನ ತಲುಪಿ ಅಪಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣದಲ್ಲಿರುವ ಗೊಂದಲಮಯ ಅಂಶಗಳನ್ನು ತೆಗೆದುಹಾಕಿ ನವೀಕರಣ ವ್ಯವಸ್ಥೆಯನ್ನು ಸರಳೀಕರಣಗೊಳಿಸುವುದು, ಅಗ್ನಿಶಾಮಕ, ಸುರಕ್ಷತೆ ಪ್ರಮಾಣ ಪತ್ರ ಪಡೆಯಲು ಕಷ್ಟವಾಗುತ್ತಿದ್ದು, ಅದನ್ನೂ ಸರಳೀಕರಣಗೊಳಿಸಿ, ನಿಗಧಿತ ಅವಧಿಯೊಳಗೆ ಅಗ್ನಿ ಶಾಮಕ ಸುರಕ್ಷತೆ ಪ್ರಮಾಣ ಪತ್ರ ಶಿಕ್ಷಣ ಸಂಸ್ಥೆಗಳ ಕೈಸೇರಬೇಕು ಎಂದು ಆಗ್ರಹಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಿದ್ದರೂ. ಈವರೆಗೂ ಯಾವ ಸೌಲಭ್ಯವನ್ನು ನೀಡಿಲ್ಲ. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರ್ಕಾರದ ಆರೋಗ್ಯ ವಿಮೆ ಯೋಜನೆಯನ್ನು ನೀಡುವುದು. ಖಾಸಗಿ ಶಾಲಾ ಕಾಲೇಜುಗಳ ಮಾನ್ಯತಾ ನವೀಕರಣ ಸಮಯದಲ್ಲಿ ಈಗಾಗಲೇ ಶಾಲಾ ಕಾಲೇಜು ಕಟ್ಟಡ ಹೊಂದಿರುವ ಸಂಸ್ಥೆಗಳಿಗೆ ವಿಧಿಸಿರುವ ಭೂಪರಿವರ್ತನಾ ಷರತ್ತುಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಆರ್‌ಟಿಇ ಕಂತುಗಳಲ್ಲಿರುವ ದೋಷ ಸರಿಪಡಿಸುವುದು, ಶಿಕ್ಷಣ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಮುಕ್ತಿಗೊಳಿಸುವುದು. ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮೇಲೆ ಆಗುತ್ತಿರುವ ಹಲ್ಲೆಗಳನ್ನು ತಡೆಗಟ್ಟುವುದು, ಪಠ್ಯಪುಸ್ತಕಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವುದು. ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ಆಸ್ತಿ ತೆರಿಗೆಯಿಂದ ಮುಕ್ತಿಗೊಳಿಸುವುದು. ಶಿಕ್ಷಣ ಕ್ಷೇತ್ರದ ವಸತಿ ಶಾಲೆಗಳ ಪ್ರಾರಂಭ ಮತ್ತು ನಿರ್ವಹಣೆಗೆ ಸೂಕ್ತ ನಿಯಮಗಳನ್ನು ರಾಜ್ಯ ಸರ್ಕಾರ ರಚಿಸುವುದು.
ಪ್ರತಿಭಟನೆ ಉದ್ದೇಶಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿ ಕೆಲಸ ಮಾಡುವ ಶಿಕ್ಷಕರು, ಸಿಬ್ಬಂದಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಮುಖ್ಯವಾಗಿ ಅಗ್ನಿಶಾಮಕ ಸುರಕ್ಷತಾ ಪ್ರಮಾಣ ಪತ್ರ, ಶಿಕ್ಷಕರು, ಆಡಳಿತ ಮಂಡಳಿಗಳ ಸುರಕ್ಷತೆಯನ್ನು ಒದಗಿಸಬೇಕಿದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸರ್ಕಾರ ಪ್ರತಿವರ್ಷ 5000 ಕೋಟಿ ನೀಡುತ್ತಿದೆ. ಆದರೆ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಆರೋಗ್ಯ ಕ್ಷೇತ್ರದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಚುನಾವಣೆ ಮತ್ತು ಇತರೆ ಸರ್ಕಾರಿ ಕಾರ್ಯಕ್ರಮಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಸುಗಳನ್ನು ಬಿಡಲಾಗುತ್ತಿದೆ. ಅದರ ವೆಚ್ಚವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೇ ಭರಿಸುತ್ತದೆ. ಕೂಡಲೇ ಸಾರಿಗೆ ನಿಗಮಕ್ಕೆ ನೀಡಿದಂತೆ ವಾಹನದ ಇಂಧನ ವೆಚ್ಚ ಮತ್ತು ಚಾಲಕರ ಭತ್ಯೆಯನ್ನು ಸರ್ಕಾರದಿಂದ ನೀಡಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲಾರಿ-ಕಾರ್ ಮುಖಾಮುಖಿ ಡಿಕ್ಕಿ; ಓರ್ವ ಸಾವು
ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಪ್ರತಾಪ್‌ಗೌಡ ಪಾಟೀಲ್, ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ರಾಜಾ ಶ್ರೀನಿವಾಸ ನಾಯಕ, ಕೇಶವರೆಡ್ಡಿ, ಡಾ. ರಝಾಕ್ ಉಸ್ತಾದ್, ಥಾಮಸ್ ಬೆಂಜಿಮನ್, ಮಲ್ಲಪ್ಪ, ರವಿ, ಯು.ದೊಡ್ಡಬಸವರಾಜ, ಇಕ್ಬಾಲ್ ಅಹ್ಮದ್ ಸೇರಿದಂತೆ ಇತರರಿದ್ದರು. ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
