ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದಲಿತರಪರ ಹೋರಾಟಗಾರರು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ದಲಿತ ಹೋರಾಟಗಾರ ಮಾರೆಪ್ಪ ಹರವಿ ಮಾತನಾಡಿ, “ಕೇಂದ್ರ ಗೃಹಸಚಿವ ಅಮಿತ್ ಶಾ ಲೋಕಸಭಾ ಕಲಾಪದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ʼಅಂಬೇಡ್ಕರ್ ಜಪ ಮಾಡಿದರೆ ಏನು ಬರುತ್ತದೆ, ಅದೇ ದೇವರ ಜಪ ಮಾಡಿದರೆ ಸ್ವರ್ಗವಾದರೂ ಸಿಗುತ್ತದೆʼ ಎಂದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ” ಎಂದರು.
“ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ಅಮಿತ್ ಶಾ ಅವರು ಗೃಹಸಚಿವರಾಗುವ ಯೋಗ ದೊರೆತಿದೆ. ಇಲ್ಲದಿದ್ದರೆ ಗುಜರಿ ಕೆಲಸ ಮಾಡುತ್ತಿದ್ದರು. ದೇವರು ಜಪ ಮಾಡುವ ನೀವು ಸಂವಿಧಾನ ಮೇಲೆ ಯಾಕೆ ಪ್ರಮಾಣ ವಚನ ಮಾಡುತ್ತೀರಿ, ಅಧಿಕಾರದ ಜವಾಬ್ದಾರಿ ವಹಿಸಿಕೊಂಡಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಚಾಲನೆ, ಅಕ್ಷರ ಜಾತ್ರೆಗೆ ಹರಿದು ಬಂದ ಜನಸಾಗರ
ಅಂಬೇಡ್ಕರ್ ಅವರ ಮೇಲೆ ಬಿಜೆಪಿಗೆ ಇರುವ ನಿಲುವನ್ನು ಅಮಿತ್ ಶಾ ತೋರಿಸಿದ್ದಾರೆ. ಈ ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ಅಂಬೇಡ್ಕರ್ ಸ್ಮರಣೆ ನಿತ್ಯ ಇರಲಿದೆ. ನಾವು ಹಾಕಿರುವ ಬಟ್ಟೆ ಸೇರಿದಂತೆ ಪ್ರತಿ ವಿಚಾರದಲ್ಲಿಯೂ ಅಂಬೇಡ್ಕರ್ ನಮಗೆ ನಿತ್ಯ ಸ್ಮರಣೆ” ಎಂದರು.
ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿ, ಜಾನ್ ವೆಸ್ಲಿ, ಸಾಜೀದ್ ಹುಸೇನ್, ಖಾಜಾ ಅಸ್ಲಾಂ, ಆಂಜನೇಯ ಕುರುಬದೊಡ್ಡಿ, ಶ್ರೀನಿವಾಸ್ ಕೊಪ್ಪರ ಸೇರಿದಂತೆ ಇತರರು ಇದ್ದರು.
