ಶ್ರೀರಾಮಸೇನೆ ಸಂಘಟನೆಯು ದಲಿತ ಹೋರಾಟಗಾರ ಆರ್ ಮಾನಸಯ್ಯ ಅವರ ಮನೆಯ ಮುಂದೆ ಶವಯಾತ್ರೆ ನಡೆಸಿ, ಗಡೀಪಾರು ಮಾಡಬೇಕು ಎಂದಿರುವುದು ಹಾಗೂ ಅವರ ಬಗ್ಗೆ ಸುಳ್ಳು ಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ದಲಿತಪರ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ರಾಯಚೂರು ಪಟ್ಟಣದ ಪ್ರವಾಸಿ ಮಂದಿರದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ಸಹಾಯಕ ಆಯುಕ್ತರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
“ಆರ್ ಮಾನಸಯ್ಯನವರು ಭಾರತದ ಸಂವಿಧಾನ, ಭಾರತ ದೇಶದ ಬಹು ಸಂಸ್ಕೃತಿಯ ಸ್ಥಾನಮಾನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲಿನ ಅಪಾರವಾದ ಅಭಿಮಾನ ಮತ್ತು ದಲಿತರ ಅಸ್ಮಿತೆಯನ್ನು ಎತ್ತಿ ಹಿಡಿದವರು. ಇದನ್ನು ಸಹಿಸದ, ಸಂಘ ಪರಿವಾರ, ಶ್ರೀರಾಮ ಸೇನೆಯು, ಸಾಮಾಜಿಕ ಜಾಲತಾಣಗಳ ಮೂಲಕ ಅವರ ವಿರುದ್ಧ ಸುಳ್ಳು ಪ್ರಚಾರ ಮಾಡುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆರ್ ಮಾನಸಯ್ಯ ಹಿಂದೂ ವಿರೋಧಿ, ಮಾನಸಿಕ ಅಸ್ವಸ್ಥರು, ಕಾರ್ಮಿಕರಿಗೆ ಮೋಸ ಮಾಡಿದವರು, ಅರಣ್ಯ, ಭೂಮಿ ಕಬಳಿಕೆದಾರರೆಂದು ಸುಳ್ಳು ಪ್ರಚಾರ ಮಾಡಿದ್ದು, ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ವ್ಯಾಪಕವಾದ ಕೆಟ್ಟ ಪ್ರಚಾರದ ಮೂಲಕ ಸಂಘಪರಿವಾರಗಳು ಅವರ ತೇಜೋವಧೆಗೆ ಮುಂದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಲಿಂಗಸೂಗೂರು ಎಸಿ ಕಚೇರಿ ಮುಂದೆ ಶ್ರೀ ರಾಮಸೇನೆಯು ಪ್ರತಿಭಟನೆ ನಡೆಸಿ ಆರ್ ಮಾನಸಯ್ಯನವರ ಗಡಿಪಾರಿಗೆ ಒತ್ತಾಯಿಸಿತು ಮತ್ತು ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಮೋಸ, ಷಡ್ಯಂತ್ರ, ಕುತಂತ್ರ, ನಂಬಿಕೆ ದ್ರೋಹದಂತಹ ಹಣ ಕೃತ್ಯಗಳ ಮೂಲಕ ನಾಡಿನ ಹೆಸರಾಂತ ಪತ್ರಕರ್ತರು ಹಾಗೂ ಸಂಶೋಧಕರನ್ನು ಕೊಂದು ಹಾಕಿದ ಕುಖ್ಯಾತಿ ಇವರಿಗೆ ಸಲ್ಲುತ್ತದೆ. ನಾಡಿನ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಗೌರಿ ಲಂಕೇಶ್ ಮತ್ತು ಎಂ ಎಂ ಕಲಬುರ್ಗಿಯವರ ಹತ್ಯೆಗಳು ರಕ್ತ ಸಾಕ್ಷಿಯಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತರ ಏಳಿಗೆಗೆ ಸರ್ಕಾರ ಮೀಸಲಿಟ್ಟ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ: ರಮೇಶ್ ವೀರಾಪೂರು
“ಇಂದಿನ ಹೋರಾಟದ ಮೂಲಕ, ಶ್ರೀರಾಮ ಸೇನೆ ಅವರಿಂದ ಜತೆಗೆ ಕೂಡಲೇ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಟ್ಟಿ ಕಾರ್ಯಕ್ರಮ ಸಂಘಟಿಸಿದ ಹಾಗೂ ಅದರಲ್ಲಿ ಭಾಗವಹಿಸಿದ ಎಲ್ಲ ಸಮಾಜಘಾತುಕ ಶಕ್ತಿಗಳ ವಿರುದ್ಧ ಸರ್ಕಾರ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿ, ಸದರಿಯವರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಕುಣೆಕೆಲ್ಲೂರು, ಲಿಂಗಪ್ಪ ಪರಂಗಿ, ಸಂಜೀವಪ್ಪ ಹುನಕುಂಟಿ, ಮೋಹನ್ ಗೋಸ್ಲೆ, ಉಮೇಶ ಐಹೊಳ್ಳರ್, ಜಿಲಾನಿ ಪಾಷಾ ಕರವೇ, ದೇವರಾಜ ಸಂತೆಕೆಲ್ಲೂರು, ದುರುಗಪ್ಪ ಅಗ್ರಹಾರ, ಮಾದೇಶ ಸರ್ಜಾಪೂರು, ಯಮನಪ್ಪ, ಎಂ.ಗಂಗಾಧರ, ತಿಪ್ಪರಾಜ ಗೆಜ್ಜಲಗಟ್ಟಾ, ಶಿವು ಗೆಜ್ಜಲಗಟ್ಟಾ, ನಾಗರಾಜ, ರಾಮಣ್ಣ ಹೊನ್ನಹಳ್ಳಿ, ಶಿವಣ್ಣ ಪರಂಗಿ, ಸಿದ್ದಪ್ಪ ಪರಂಗಿ, ಆದೇಶ ನಗನೂರು, ಪ್ರಭುಲಿಂಗ ಮೇಗಳಮನಿ, ಪ್ರದೀಪ್ ಚಿಕ್ಕಹೆಸರೂರು, ಯಮನಪ್ಪ ಸರ್ಜಾಪೂರು, ಚಿದಾನಂದ ಕಸಬಾ ಲಿಂಗಸುಗೂರು, ಶರಣಪ್ಪ ಸಾಲಿ ಸೇರಿದಂತೆ ಇತರರು ಇದ್ದರು.
