ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಕ್ಕಳು, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಅಕ್ರಮ ಮರಳು, ಮಟ್ಕಾ, ಇಸ್ಪೀಟ್ ದಂಧೆಗಳಿಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದ ಜೆಡಿಎಸ್ ಶಾಸಕಿ ಜಿ ಕರೆಮ್ಮ ನಾಯಕ್ ಅವರ ಮಗನಿಂದಲೇ ಅಕ್ರಮ ದಂಧೆ ನಡೆಯುತ್ತಿದೆ. ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಲು ಕಾರಣರಾಗಿದ್ದಾರೆಂದು ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಹಿಳಾ ನಾಯಕಿ ಶ್ರೀದೇವಿ ನಾಯಕ್, “ಭಾನುವಾರದಂದು ದೇವದುರ್ಗದ ಅತಿಥಿ ಗೃಹದಲ್ಲಿ ಶಾಸಕಿಯ ಪುತ್ರ ಸಂತೋಷ ಸೇರಿದಂತೆ ಅವರ ಅಪ್ತ ಸಹಾಯಕರು, ಬೆಂಬಲಿಗರು ಒಗ್ಗೂಡಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಆದರೂ ಕೂಡ ಶಾಸಕಿಯೇ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ನಾಟಕ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
“ತಮ್ಮ ಮಗನ ರಕ್ಷಣೆಗೆ ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ. ಅಕ್ರಮ ಮರಳು ತಡೆಯುವುದಾಗಿ ಹೇಳಿದವರು ಪುತ್ರನಿಂದಲೇ ಅಕ್ರಮ ಮರಳು ದಂಧೆ ನಡೆಸುತ್ತಿರುವುದು ಬಹಿರಂಗವಾಗಿದೆ. ವಿಧಾನಸೌಧದಲ್ಲಿ ಅಧಿಕಾರಿಗಳು ಮಾತು ಕೇಳುತ್ತಿಲ್ಲ, ಜೀವ ರಕ್ಷಣೆ ನೀಡಬೇಕೆಂದು ಕೇಳಿದವರೇ ಅಧಿಕಾರಿಗಳ ಮೇಲೆ ಗೂಂಡಾಗಿರಿ ಪ್ರದರ್ಶಿಸಿದರೆ ಹೇಗೆ” ಎಂದು ಪ್ರಶ್ನಿಸಿದರು.
“ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಯವರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಕೇವಲ ಪ್ರಕರಣ ದಾಖಲಿಸಿದರೆ ಸಾಲದು ಆರೋಪಿಗಳನ್ನು ಬಂಧಿಸಬೇಕು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರು ದೂರವಾಣಿ ಕರೆ ಮಾಡಿದ್ದರಿಂದ ಕರೆಯಮ್ಮನವರ ಬಂಧಿತ ಆಪ್ತ ಸಹಾಯಕನನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ. ಪೊಲೀಸರಿಗೇ ರಕ್ಷಣೆ ಇಲ್ಲದಂತಾದರೆ ಜನಸಾಮಾನ್ಯರ ಪಾಡೇನು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜೀಸಸ್ ಮೇರಿ ಜೋಸೆಫ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣೆ
“ಶಾಸಕಿ ಕರೆಮ್ಮ ಸಾರ್ವಜನಿಕರಿಗೆ ಯಾವುದೇ ಅಕ್ರಮ ನಡೆಸಿಲ್ಲವೆಂದು ಹೇಳಬೇಕಿದೆ. ತಮ್ಮ ಪುತ್ರನಿಂದಲೇ ಗೋಪಾಲಪುರ ಸೇರಿದಂತೆ ಅನೇಕ ಕಡೆ ನಡೆಯುತ್ತಿರುವ ಅಕ್ರಮ ಮರಳು ಸಾಗಾಣೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದ್ದು, ಈ ಕುರಿತು ರಾಜ್ಯದ ಗೃಹ ಸಚಿವರಿಗೂ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡರುಗಳಾದ ಶಶಿಕಲಾ ಭೀಮರಾಯ, ಮಂಜುಳಾ ಅಮರೇಶ, ಮಾಲಾ ಭಜಂತ್ರಿ ಇದ್ದರು.
ವರದಿ : ಹಫೀಜುಲ್ಲ