ಮೂರ್ಛೆ ಹೋಗಿದ್ದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ, ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಪಾಮನಕಲ್ಲೂರು ಕ್ರಾಸ್ ಬಳಿ ಕಾರೊಂದರಲ್ಲಿ ನಾಗರ ಹಾವು ಪತ್ತೆಯಾಗಿತ್ತು. ಹಾವನ್ನು ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ. ಹಟ್ಟಿ ಚಿನ್ನದಗಣಿ ಬಳಿಯಿದ್ದ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ರವೀಂದ್ರನಾಥ್ ಅವರು ಹಾವು ಫಿನಾಯಿಲ್ ಸಿಂಪಡನೆ ಮಾಡಿದ್ದರು. ಅವರ ವಾಸನೆಯಿಂದ ನಾಗರಹಾವು ಮೂರ್ಛೆ ತಪ್ಪಿತ್ತು ಎಂದು ತಿಳಿದುಬಂದಿದೆ.
ಬಳಿಕ, ವೈದ್ಯಾಧಿಕಾರಿ ರವೀಂದ್ರನಾಥ್ ಮತ್ತು ಉರಗತಜ್ಞ ಖಾಲೀದ್ ಚಾವೂಸ್ ಅವರು ಹಾವನ್ನು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ. ಇದರಿಂದ ಮೂರ್ಛೆ ಹೋಗಿದ್ದ ನಾಗಹಾವು ಬದುಕುಳಿದಿದೆ.
“ಮೂರ್ಛೆ ಹೋಗಿದ್ದ ಹಾವನ್ನು ಸೆರೆ ಹಿಡಿದು, ಪೈಪ್ ಸಹಾಯದಿಂದ ಹಾವಿಗೆ ಗಾಳಿ ಊದಲಾಯಿತು. ಆದರೆ, ಹಾವು ಸ್ಪಂದಿಸಲಿಲ್ಲ. ಬಳಿಕ, ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಲಾಯಿತು. ಈಗ ಹಾವು ಚೇತರಿಸಿಕೊಂಡಿದೆ, ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ” ಎಂದು ಖಾಲೀದ್ ಚಾವೂಸ್ ವಿವರಿಸಿದ್ದಾರೆ.