ರಾಜ್ಯದಲ್ಲಿ 400 ಪಬ್ಲಿಕ್ (ಕೆಪಿಎಸ್) ಶಾಲೆಗಳನ್ನು ತೆರೆಯುವ ಕುರಿತು ನೀಡಿರುವ ಬಜೆಟ್ ಹೇಳಿಕೆ ವಿರೋಧಿಸಿ ರಾಯಚೂರು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ವತಿಯಿಂದ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾ.7 ರಂದು ಕರ್ನಾಟಕ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 400 ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಘೋಷಿಸಿರುವುದು ಆಘಾತಕಾರಿಯಾಗಿದೆ. ಕನ್ನಡ ಭಾಷೆಗೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇದು ಭಾರೀ ದೊಡ್ಡ ಹೊಡೆತ ನೀಡುವ ವಿಷಯವಾಗಿದೆ. ಈಗಾಗಲೇ ಪಬ್ಲಿಕ್ ಸ್ಕೂಲ್ ಹೆಸರಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಗಳು ಆರಂಭಗೊಂಡು ಕನ್ನಡ ಮಾಧ್ಯಮ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಕೀಳರಿಮೆ ಮೂಡಿಸಿದೆ ಹಾಗೆ ಇಂಗ್ಲಿಷ್ ಮಾಧ್ಯಮ ಸೆಳೆತ ಮೂಡಿಸಿ ಕನ್ನಡ ಮಾಧ್ಯಮಕ್ಕೆ ಕೊಡಲಿಪೆಟ್ಟು ಬೀಳಹತ್ತಿದೆ. ಹೀಗಾದರೆ ಮುಂದಿನ ಐದಾರು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮುಚ್ಚಿಹೋಗಬಹುದು” ಎಂದು ಸಮಿತಿಯ ಮುಖಂಡರು ಆತಂಕ ವ್ಯಕ್ತಪಡಿಸಿದರು.
“ಕೂಡಲೇ 400 ಅಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಗಳನ್ನು ತೆರೆಯುವ ಘೋಷಣೆ ಕೈ ಬಿಡಬೇಕು. ಈಗಾಗಲೇ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ತೆರೆದಿರುವ ಇಂಗ್ಲಿಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನು ಕೂಡಲೇ ಮುಚ್ಚಬೇಕು. ಎಲ್ ಕೆ ಜಿ, ಯು ಕೆ ಜಿಯಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾತ್ರ ನಡೆಸಬೇಕು. ಇದು ರಾಜ್ಯ ಭಾಷಾ ನೀತಿಗೆ ಅನುಗುಣವಾಗಿದೆ. ಕನ್ನಡ ಮಾಧ್ಯಮ ಬಿಟ್ಟು ಉಳಿದೆಲ್ಲ ಶಿಕ್ಷಣ ಮಾಧ್ಯಮ ರದ್ದುಪಡಿಸಬೇಕೆಂದು” ಅವರು ಒತ್ತಾಯಿಸಿದರು.
ಇದನ್ನೂ ಓದಿ: ರಾಯಚೂರು | ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ತಹಶೀಲ್ದಾರರಿಗೆ ಮನವಿ
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಡುಮನಿ, ಪ್ರಧಾನ ಕಾರ್ಯದರ್ಶಿ ಹನುಮಂತು ಆಲೂರು, ಸಹ ಕಾರ್ಯದರ್ಶಿ ಸಿದ್ರಾಮಪ್ಪ ಮಾಲೀಪಾಟೀಲ್, ಉಪಾಧ್ಯಕ್ಷರಾದ ರಾಮಣ್ಣ ಮ್ಯಾದಾರ, ರಾಮಲಿಂಗಪ್ಪ, ಪ್ರಮುಖರಾದ ಬಶೀರ ಅಹ್ಮದ್ ಹೊಸಮನಿ, ರುದ್ರಯ್ಯ ಗಣಾರಿ, ವೆಂಕಟರೆಡ್ಡಿ, ಹನುಮಂತಪ್ಪ, ರಫೀಕ್ ಅಹ್ಮದ್, ಅಶೋಕಕುಮಾರ ಜೈನ್, ಈರಣ್ಣ ಬೆಂಗಾಲಿ ಸೇರಿದಂತೆ ಇತರರಿದ್ದರು.
