ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ, ಕಾರ್ಮಿಕ ಸಂಘಟನೆಗಳೊಂದಿಗೆ ದೇಶಾದ್ಯಂತ ಗ್ರಾಮೀಣ ಬಂದ್ ಮತ್ತು ಕೈಗಾರಿಕಾ ಮುಷ್ಕರಕ್ಕೆ ಎಸ್‌ಕೆಎಂ ಕರೆ ಕೊಟ್ಟಿದೆ. ಮುಷ್ಕರದ ಭಾಗವಾಗಿ, ರೈತ ಹೋರಾಟವನ್ನು ಬೆಂಬಲಿಸಿ ಟಿಯುಸಿಐ ನೇತೃತ್ವದಲ್ಲಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದೆ.
ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾವಣೆಗೊಂಡ ಸಂಘಟನೆ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
“ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಬಡವರ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ ಜಮಾ ಮಾಡುವುದಾಗಿ ಜೋರಾಗಿ ಘೋಷಣೆ ಮಾಡಿದ ಬಿಜೆಪಿ ನೇತೃತ್ವದ ಸರ್ಕಾರದ ದಶಕದ ಆಡಳಿತದಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗದಿರುವುದು ವಾಸ್ತವದಲ್ಲಿ ಇಂತಹ ಭರವಸೆಗಳಿಗೆ ದ್ರೋಹ ಬಗೆದಂತಿದೆ” ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಆದಾಯವನ್ನು ಕಾನೂನು ಬದ್ಧ ಖಾತರಿಯೊಂದಿಗೆ ದ್ವಿಗುಣಗೊಳಿಸಬೇಕು. ಬೀಜದ ಮೇಲಿನ ಸಬ್ಸಿಡಿಯನ್ನು ಶೇ.50ರಷ್ಟು ಹೆಚ್ಚಳ ಮಾಡಬೇಕು. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರಸಗೊಬ್ಬರ, ವಿದ್ಯುತ್ ಸಬ್ಸಿಡಿ ಒದಗಿಸಬೇಕು. ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ ₹31,000 ನಿಗದಿಪಡಿಸಬೇಕು. ಕಾರ್ಮಿಕ ದ್ರೋಹಿ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಉದ್ಯೋಗ ಖಾತರಿ ಕಾರ್ಮಿಕರ ದಿನಗೂಲಿ ₹500 ಹಾಗೂ ವರ್ಷಪೂರ್ತಿ ಕೆಲಸ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ, ಖಾಯಂ ಕೆಲಸ ಒದಗಿಸಬೇಕು. ತೋಟದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕೆಲಸದ ಸುರಕ್ಷತೆ ಒದಸಬೇಕು. ಚಳವಳಿ ನಡೆಸುತ್ತಿರುವ ರೈತ ಕಾರ್ಮಿಕರನ್ನು ದೆಹಲಿ ಒಳಗಡೆ ಬಿಡಬೇಕು. ರೈತ ಕಾರ್ಮಿಕರು ಬರುವ ಹೆದ್ದಾರಿಗಳಿಗೆ ಮೊಳೆ ಹೊಡೆದು, ಹೊಗೆ ಬಾಂಬ್ ಸಿಡಿಸಿ, ರಬ್ಬರ್ ಗುಂಡುಗಳನ್ನು ಹೊಡೆದು, ದೌರ್ಜನ್ಯವೆಸುತ್ತಿರುವ ಕೇಂದ್ರ ಸರ್ಕಾರದ ಫ್ಯಾಸಿಸ್ಟ್ ಸರ್ಕಾರಿ ಭಯೋತ್ಪಾದನೆಯನ್ನು ನಿಯಂತ್ರಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ: ಸಚಿವ ಶಿವಾನಂದ ಪಾಟಿಲ್ ಭರವಸೆ
“2020ರ ರೈತ ಚಳುವಳಿಯಲ್ಲಿ ಮೃತರಾಗಿರುವ 780 ಮಂದಿ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪೊಲೀಸ್ ಮಿಲಿಟರಿ ಪಡೆಗಳಿಂದ ಗಾಯಗೊಂಡ ರೈತ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ, ಮುಖಂಡರುಗಳಾದ ಅಜೀಜ್ ಜಾಗೀರದಾರ, ಮಲ್ಲಯ್ಯ ಕಟ್ಟಿಮನಿ, ಅಡವಿರಾವ್, ಸೈಯದ್ ಅಬ್ಬಾಸಲಿ, ಭಾಷಾ ಖಾನ್, ಲಕ್ಷ್ಮಣ್, ನಬಿಸಾಬ್, ಆಂಜನೇಯ ರಾಂಪುರ್, ಮಲ್ಲಿಕಾರ್ಜುನ್ ಗಣೆಕಲ್, ಬಸವರಾಜ್ ಗುಡಿಹಾಳ ಸೇರಿದಂತೆ ಕಾರ್ಮಿಕರು ಇದ್ದರು.
ವರದಿ : ಹಫೀಜುಲ್ಲ