ದೇಶದ ಸಂವಿಧಾನವನ್ನು ಧಿಕ್ಕರಿಸಿ, ಬಹುರಾಷ್ಟ್ರೀಯ, ಬಹು ಧರ್ಮೀಯ, ಬಹುಜನಾಂಗೀಯ, ಬಹುಭಾಷಿಕ, ಸಂಸ್ಕೃತಿಯ ದೇಶವನ್ನು ಹಿಂದೂ ರಾಷ್ಟ ಮಾಡಲು ಹೊರಟಿರುವ ಸಂಘ ಪರಿವಾರದ ಮನುವಾದಿ ಸರ್ಕಾರ ಫಾಸಿಸ್ಟ್ ಮನೋಭಾವನ್ನು ಹಿಮ್ಮೆಟ್ಟಿಸಲು ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾ ರಂಗ ಅಸ್ತಿತ್ವಕ್ಕೆ ತರಲಾಗಿದ್ದು, ಜನವರಿ 1ರಂದು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆ ಸಂಚಾಲಕ ಎಂ ಆರ್ ಭೇರಿ ಹೇಳಿದರು.
ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಒಂದು ಭಾಷೆ ಹೆಸರಿನಲ್ಲಿ ಬಹುಸಂಸ್ಕೃತಿ, ಸಂಸ್ಕತಿ ಹಾಗೂ ಭಾಷೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸದಸ್ಯತ್ವ ಪಡೆಯಲು ಇರುವ ನಿರ್ಬಂಧವನ್ನು ರದ್ದುಗೊಳಿಸಿ ಕೇವಲ ಆರ್‌ಎಸ್‌ಎಸ್ ಸೇರ್ಪಡೆಗೆ ಅವಕಾಶ ನೀಡಲಾಗಿದೆ” ಎಂದು ಹೇಳಿದರು.
“ದೇಶದಲ್ಲಿ 50 ಕೋಟಿಗೂ ಹೆಚ್ಚಾಗಿರುವ ಕಾರ್ಮಿಕರನ್ನು ರಕ್ಷಿಸುವ ಬದಲು ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆ ರೂಪಿಸಲಾಗಿದೆ. ದೇಶದ ಅರ್ಧದಷ್ಟು ಇರುವ ಮಹಿಳೆಯರ ಮೇಲೆ ನಿತ್ಯವೂ ದೌರ್ಜನ್ಯ, ಅತ್ಯಾಚಾರಗಳು ನಡೆದರೂ ಕೂಡಾ ತಡೆಯದೆ ನಿರ್ಲಕ್ಷಿಸುವುದ, ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ರೂಪಿಸಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರ, ಬ್ರಾಹ್ಮಣವಾದಿ ಸರ್ಕಾರ” ಎಂದು ಖಂಡಿಸಿದರು.
“ಪ್ರಧಾನ ಮಂತ್ರಿ ಸೇರಿದಂತೆ ಅಧಿಕಾರಿಗಳು, ಸಂಸದರು, ಸಚಿವರು ಹಿಂದೂ ಮತೀಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜಾತ್ಯತೀತ ನಿಲುವುಗಳಿಗೆ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ದಮನಿತ ಸಮುದಾಯಗಳ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಐಕ್ಯ ಹೋರಾಟ ನಡೆಸಲು ಎಲ್ಲ ಜೀವಪರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲಾಗುತ್ತದೆ” ಎಂದರು.
“ದೇಶದ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪೆನಿಗಳ ಬಂಡವಾಳಶಾಹಿಗಳ ಕೈಗೆ ನೀಡಿ ಆಳುತ್ತಿದ್ದಾರೆ. ಧರ್ಮಾಧಾರಿತವಾದ ನಿಲುವುಗಳನ್ನು ಬೆಂಬಲಿಸುತ್ತ ಬರುತ್ತಿದೆ. ಒಂದು ಧರ್ಮವನ್ನು ಪ್ರತಿಪಾದಿಸಿ ಜಾತ್ಯತೀತ ನಿಲುವುಗಳಿಗೆ ವಿರೋಧಿಯಾಗಿ ವರ್ತಿಸುತ್ತಿದೆ. ಮನುವಾದ, ಜಾತಿವಾದವನ್ನು ಸನಾತನ ಸಂಸ್ಕೃತಿಯನ್ನು ಬೆಂಬಲಿಸಿ ಸಮಾನತೆ, ಮೀಸಲಾತಿ, ಆಹಾರ ಸಂಸ್ಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಒಂದು ದೇಶ ಒಂದು ಚುನಾವಣೆ ನಡೆಸಲು ಮುಂದಾಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅಮಿತ್ ಶಾ ಹೇಳಿಕೆ ಖಂಡಿಸಿ ಡಿ.30ರಂದು ಕಂಪ್ಲಿ ಬಂದ್‌ಗೆ ಕರೆ
“ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ವಿವಿಧ ಸಂಘಟನೆಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿಯೂ ಸಂಘಟನೆ ಬಲಗೊಳಿಸಿ ಹಿಂದುತ್ವ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಲಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರವೀಂದ್ರನಾಥಪಟ್ಟಿ, ಜಿ ಅಮರೇಶ, ಎಂ ಗಂಗಾಧರ್, ಭಾಸ್ಕರ, ನಿರಂಜನ, ಷಣ್ಮುಖಪ್ಪ ಘಂಟಿ ಇದ್ದರು.
