ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಜಂಟಿ ಸಂಘಟನೆಗಳು ಪಟ್ಟಣ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದವು.
ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಜೊತೆಗೆ ಬಸ್ ನಿಲ್ದಾಣ ಒತ್ತುವರಿ, ರುದ್ರಭೂಮಿ, ಮಟಕಾ, ಇಸ್ಪೀಟ್ ದಂಧೆ ಮಿತಿ ಮೀರಿದ್ದು ಸಂಬಂಧಪಟ್ಟ ಇಲಾಖೆಗಳು ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದವು.
ಹಲವು ವರ್ಷಗಳಿಂದ ಅನೇಕ ಬೇಡಿಕೆಗಳ ಈಡೇರಿಕೆಗೆ ಹಲವು ಹಂತಗಳಲ್ಲಿ ಹೋರಾಟ ನಡೆಸಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಸೇರಿ ತಾಲೂಕಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಸಮಸ್ಯೆಗಳನ್ನು ಈಡೇರಿಸುವಲ್ಲಿ ಪಪಂ ಹಾಗೂ ತಾಲೂಕು ಪಂಚಾಯತಿ ಆಡಳಿತ ವಿಫಲವಾಗಿವೆ. ಈ ಕುರಿತು ಅಸಡ್ಡೆ ತೋರುತ್ತಿವೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದರು.
ಈಗಲಾದರೂ ಎಚ್ಚೆತ್ತು ಆಡಳಿತ ವರ್ಗ ಇತ್ತ ಗಮನಹರಿಸಬೇಕು. ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಬೀಗಮುದ್ರೆ ಹಾಕಿ ಧರಣಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಮುಖ್ಯಾಧಿಕಾರಿ ಜಗನಾಥ್ ದೇಸಾಯಿ ಮನವಿ ಪತ್ರ ಸ್ವೀಕರಿಸಿ ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಾಯಚೂರು | ಅವೈಜ್ಞಾನಿಕ ಟೋಲ್ ಗೇಟ್; ಕೂಡಲೇ ಕಾಮಗಾರಿ ನಿಲ್ಲಿಸುವಂತೆ ರೈತ ಸಂಘ ಒತ್ತಾಯ
ಈ ವೇಳೆ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಸಿಐಟಿಯು ತಾಲೂಕು ಸಂಚಾಲಕ ಹನೀಫ್, ಡಿವೈಎಫ್ಐ ರಿಯಾಜ್ ಖುರೇಷಿ, ಚನ್ನಬಸವ ಅಂಬೇಡ್ಕರ್ ನಗರ, ಸಿಐಟಿಯು ಮುಖಂಡ ವೆಂಕಟೇಶ ಗೋರಕಲ್, ನಿಂಗಪ್ಪ ಎಂ, ಅಲ್ಲಾಭಕ್ಷ ದೇವರಭೂಪುರು, ರಫಿ, ಎಸ್ಎಫ್ಐ ಮುಖಂಡ ವಿನಯ್ ಕುಮಾರ್, ನಾಗರಾಜ್ ಹನಮಗುಡ್ಡ ಹೊಸೂರು, ಹಾಜಿ ಕಟ್ಟಿಮನಿ, ಖಾಜಾ ಮೈನುದ್ದೀನ್, ಮಹಾಂತೇಶ್ ಮುದಗಲ್, ನಾಗಯ್ಯ ತಾತಾ, ಇಮ್ರಾನ್, ಬೆಟ್ಟಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
