ಹದಿನಾಲ್ಕು ವಿಶೇಷ ವರ್ಗದಲ್ಲಿ ಬರುವ ವಿಧವೆಯರು, ಬೀದಿ ಬದಿ ವ್ಯಾಪಾರಿಗಳು, ಅಂಗವಿಕಲರನ್ನು ಸಮೀಕ್ಷೆ ಮಾಡಿ, ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದ ಸರ್ವೆ ನಂ. 1403, 1553, 802, 928 ಮತ್ತು ಇತರೇ ಸರ್ಕಾರಿ ಭೂಮಿ ಗುರುತಿಸಿ ವಸತಿಹೀನರಿಗೆ ನಿವೇಶನ ಮಂಜೂರು ಮಾಡಬೇಕು. ವಿಶೇಷ ವರ್ಗದಲ್ಲಿ ಬರುವವರು ತೀರಾ ಆರ್ಥಿಕವಾಗಿ ಹಿಂದುಳಿದಿದ್ದು, ಸ್ವಂತ ನಿವೇಶನ ಖರೀದಿ ಮಾಡಲು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಮೀಕ್ಷೆ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದಲ್ಲಿ ವಿಶೇಷ ವರ್ಗದಲ್ಲಿ ಬರುವವರು ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಇದ್ದು, ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪ್ರತೀ ತಿಂಗಳು ಮನೆ ಬಾಡಿಗೆ ಕಟ್ಟಲು ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷ ವರ್ಗದವರ ಸಮೀಕ್ಷೆ ಮಾಡುವಂತೆ ಹಲವು ಭಾರಿ ಮನವಿ ಸಲ್ಲಿಸಿದರೂ ಸ್ಪಂಧಿಸಿಲ್ಲ ಎಂದು ದೂರಿದರು.
ಕೂಡಲೇ ವಿಶೇಷ ವರ್ಗದಲ್ಲಿ ಬರುವ ವಿಧವೆಯರು, ಬೀದಿ ವ್ಯಾಪಾರಿಗಳು, ಅಂಗವಿಕಲರ ಸಮೀಕ್ಷೆ ನಡೆಸಿ ನಿವೇಶನ ಇಲ್ಲದವರಿಗೆ ನಿವೇಶನ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಕಾರ್ಯದರ್ಶಿ ನೂರ್‌ಜಾನ್, ಮಾಧವರೆಡ್ಡಿ, ನಾಗರಾಜ, ವೆಂಕಟೇಶ ಭಂಡಾರಿ, ಜಿ.ರಾಜು, ಮಹೇಶ, ಹುಲಿಗೆಮ್ಮ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.