ಪರಿಶಿಷ್ಟ ಪಂಗಡ ಜಾತಿ ಮೀಸಲಾತಿ ದುರ್ಬಳಕೆ ಮಾಡಿಕೊಂಡಿರುವ ಕುರಿತಂತೆ ರಾಜಾ ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋಗುವುದಾಗಿ ನರಸಿಂಹನಾಯಕ ಕರಡಿಗುಡ್ಡ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ರಾಜಾ ಅಮರೇಶ್ವರ ನಾಯಕ ಶಾಲಾ ದಾಖಲೆಗಳಲ್ಲಿ ಕ್ಷತ್ರಿಯ ಎಂದು ನಮೂದಿಸಲಾಗಿದ್ದು, ಬೇರೆ ಬೇರೆ ಶಾಲಾ ತರಗತಿಯ ಪ್ರಮಾಣ ಪತ್ರದಲ್ಲಿ ಬೇರೆ ಬೇರೆ ಜಾತಿಯನ್ನು ಉಲ್ಲೇಖಿಸಲಾಗಿದೆ. ಹಿಂದೂ ಕ್ಷತ್ರಿಯ, ವಾಲ್ಮೀಕಿ ಕ್ಷತ್ರಿಯ ಎಂದು ನಮೂದಿಸಲಾಗಿದೆ. ಪರಿಶಿಷ್ಟ ಪಂಗಡ ಜಾತಿ ಪಟ್ಟಿಯಲ್ಲಿ ಕ್ಷತ್ರಿಯ ಉಪಜಾತಿ ಇಲ್ಲವೇ ಇಲ್ಲ. ಶಾಲಾ ದಾಖಲೆಗಳ ಅನ್ವಯ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಜಾತಿ ದುರ್ಬಳಕೆ ಮಾಡಿಕೊಂಡಿರುವ ಕುರಿತು ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಕುರಿತು ರಾಜಾ ಅಮರೇಶ್ವರನಾಯಕರ ಸಹೋದರ 2011ರಲ್ಲಿ ಲಿಂಗಸೂಗೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯ ಜಾತಿ ತಿದ್ದುಪಡಿ ಮನವಿಯನ್ನು ತಿರಸ್ಕರಿಸಲಾಗಿದೆ. ಹೈಕೋರ್ಟ್ ಮೊರೆ ಹೋಗಿರುವ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಜಾತಿ ದುರ್ಬಳಕೆ ಮಾಡಿಕೊಂಡಿರುವ ಕುರಿತಂತೆ ತಹಶೀಲ್ದಾರ್ ಅವರು ನಿರ್ಧಾರ ಕೈಗೊಳ್ಳಬೇಕಿದೆ” ಎಂದು ಹೇಳಿದರು.
“ಚುನಾವಣೆ ದೃಷ್ಟಿಯಿಂದ ದೂರು ಸಲ್ಲಿಸಿಲ್ಲ. ಚುನಾವಣೆಯೇ ಬೇರೆ. ಆದರೆ ಜಾತಿ ದುರ್ಬಳಕೆ ಕುರಿತಂತೆ ನಿರಂತರ ಹೋರಾಟ ನಡೆಸಲಾಗುತ್ತದೆ. ಈ ಹಿಂದೆ ಯಾವ ಆಧಾರದ ಮೇಲೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆಂಬುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಾಗಿದೆ. ಪರಿಶಿಷ್ಟ ಪಂಗಡದೊಳಗೆ ಬರುವ ಉಪಜಾತಿ ಸಮಾಜಿಕ, ಆರ್ಥಿಕ ಬೆಳವಣಿಗೆ ಮೀಸಲಾತಿ ಜಾರಿಗೊಳಿಸಲಾಗಿದೆ. ಆದರೆ ಮುಂದುವರೆದವರು ಮೀಸಲಾತಿ ಪಡೆಯುತ್ತಿರುವುದು ಸಮಾಜಕ್ಕೆ ಅನ್ಯಾಯವಾಗಿದೆ. ಜನರಲ್ಲಿ ಮಾಹಿತಿ ಕೊರತೆಯಿಂದ ಈವರಗೆ ಯಾರೂ ಕೂಡಾ ಪ್ರಶ್ನಿಸಿಲ್ಲ” ಎಂದರು.
“ಶಾಲಾ ದಾಖಲೆಗಳೇ ಜಾತಿಯನ್ನು ನಿರ್ಧರಿಸುತ್ತವೆ. ಶಾಲಾ ದಾಖಲೆಗಳಲ್ಲಿ ಕ್ಷತ್ರಿಯ ಎಂದು ನಮೂದಿಸಿದ್ದರಿಂದ ಮೀಸಲು ಪಡೆಯಲು ಸಾಧ್ಯವಾಗುವುದಿಲ್ಲ. ಅಮರೇಶ್ವರ ನಾಯಕರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಚುನಾವಣೆಗೆ ಸ್ಪರ್ದಿಸುವುದನ್ನು ತಡೆಯುವ ಉದ್ದೇಶವೂ ಇಲ್ಲ. ಅದರೆ ಮಿಸಲು ದುರ್ಬಳಕೆ ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಿ ಹೈಕೋರ್ಟ್ ಮೊರೆ ಹೋಗಲಾಗುವುದು” ಎಂದು ಹೇಳಿದರು.
ವೈ.ಹನುಮಂತನಾಯಕ ಮಾತನಾಡಿ, “ಎಸ್‌ಟಿ ಜಾತಿ ಪಟ್ಟಿಯಲ್ಲಿ ಇರದೇ ಇದ್ದರೂ ಎಸ್‌ಟಿ ಮೀಸಲು ಪಡೆದಿರುವ ರಾಜಾ ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಬೇಕು. ಸಮೂದಾಯಕ್ಕೆ ನ್ಯಾಯಕೊಡಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಚುನಾವಣೆ ಅಕ್ರಮಗಳ ಬಗ್ಗೆ “ಸಿ-ವಿಜಿಲ್ ಸಿಟಿಜನ್ ಆ್ಯಪ್‌ನಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಶರಣಬಸವ, ತಿಮ್ಮನಗೌಡ, ಹನುಮಂತಪ್ಪ ದೇವಿಪುರ, ವೆಂಕಟಸ್ವಾಮಿ, ವೆಂಕಟೇಶ ನಾಯಕ ಇದ್ದರು.
ವರದಿ : ಹಫೀಜುಲ್ಲ
