ಆರ್‌ಡಿಸಿಸಿ ಬ್ಯಾಂಕ್ ರೈತರ ಖಾತೆಗೆ ಹಣ ಹಾಕಿ, ನಂತರ ಅದನ್ನು ಖಾತೆಯಿಂದ ತೆಗೆಯುವ ಮೂಲಕ ರೈತರಿಗೆ ಸಾಲ ನೀಡಿದೆ ಎಂದು ತೋರಿಸಿ ಇದೀಗ ಸುಲಿಗೆ ಮಾಡುತ್ತಿದೆ. ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪಕರು ಸೇರಿ 14 ಜನರ ವಿರುದ್ಧ ಮುದಗಲ್ ಮತ್ತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿದ್ದು ಬಂಧಿಸಿ ತನಿಖೆ ನಡೆಸಬೇಕು ಎಂದು ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು, ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್( ಆರ್ ಕೆಡಿಸಿಸಿ) ಬ್ಯಾಂಕ್ ನಲ್ಲಿ ರೈತರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮಾ ಮಾಡಿ ಬ್ಯಾಂಕ್ ಅಧಿಕಾರಿಗಳು ಪುನಃ ವಿತ್ ಡ್ರಾ ಮಾಡಿಕೊಂಡು ಖಾತೆ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ. ಬ್ಯಾಂಕ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ, ಸಿಇಒ ಐಎಸ್ ಗಿರಡ್ಡಿ ಅವರು ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಕೂಡಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಬೇಕು ಎಂದರು.
ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಹಾಗೂ ಸಣ್ಣ ಹಾಗೂ ಮಧ್ಯಮ ಪ್ರಮಾಣ ಸಾಲಮನ್ನಾ ಮಾಡುವ ಉದ್ದೇಶದಿಂದ ಸ್ಥಾಪಿಸಲಾದ ಆರ್‌ಕೆಡಿಸಿಸಿ ಬ್ಯಾಂಕ್ ನಿಯಮ ಬಾಹೀರವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಲಿಂಗಸುಗೂರು ಬ್ರಾಂಚ್‌ನ ಲಿಂಗಸುಗೂರು ಹಾಗೂ ಮುದಗಲ್ ಪಟ್ಟಣದ ಅನೇಕ ರೈತರ ಬ್ಯಾಂಕ್ ಖಾತೆಗೆ 2017ರಿಂದ 2024ರ ವರಗೆ ಲಕ್ಷಾಂತರ ರೂಪಾಯಿ ಹಣ ಜಮಾ ಮಾಡಿ ಆನಂತರ ಬ್ಯಾಂಕ್ ಅಧಿಕಾರಿಗಳೇ ವಿತ್ ಡ್ರಾ ಮಾಡಿಕೊಂಡಿದ್ದಾರೆ ಎಂದರು.
ರೈತರ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳೆ ಪುನಃ ವಿತ್ ಡ್ರಾ ಆದ ಹಣಕ್ಕೆ ಸಾಲ ಎಂದು ನಮೂದಿಸಿಕೊಂಡು ಸಾಲ ಮರುಪಾವತಿಗೆ ರೈತರಿಗೆ ನೊಟೀಸ್ ನೀಡಿದ್ದಾರೆ ಎಂದು ಆರೋಪಿಸಿದರು. ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಆರ್ ಕೆಡಿಸಿಸಿ ಬ್ಯಾಂಕ್ ನಲ್ಲಿ 39 ಶಾಖೆಗಳಿವೆ. ರಾಯಚೂರು ಜಿಲ್ಲೆಯ 1.14 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ. ಬ್ಯಾಂಕ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ವಿಶ್ವನಾಥ ಪಾಟೀಲ, ನಿವೃತ್ತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಐಎಸ್ ಗಿರಡ್ಡಿ ಪ್ರಧಾನ ವ್ಯವಸ್ಥಾಪಕ ಅಲಿ ಮುರ್ತುಜಾ, ಆಂತರಿಕ ಲೆಕ್ಕ ಪರಿಶೋಧಕ ವಿ.ಕೆ ಇನಾಮದಾರ್ ಸೇರಿದಂತೆ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಶಾಮೀಲಾಗಿ ಹಗಲು ದರೋಡೆ ಮಾಡಿದ್ದಾರೆ ಎಂದು ದೂರಿದರು.
ರೈತ ಶರಣಬಸವ, ಬಸವರಾಜ, ಲಾಲ್ ಸಾಬ್ ಶರಣಪ್ಪ ಅವರು ನೀಡಿದ ದೂರಿನ ಮೇರೆಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ 4 ದೂರು ದಾಖಲಾಗಿದೆ ಹಾಗೂ ರೈತ ಶರಣಪ್ಪ ಅಮರಪ್ಪ ಕುರಬರ ಅವರಿಂದ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಕಾರು-ಬೈಕ್ ಡಿಕ್ಕಿ: ಇಬ್ಬರು ಮೃತ್ಯು; ಇಬ್ಬರಿಗೆ ಗಂಭೀರ ಗಾಯ
10 ವರ್ಷಗಳಲ್ಲಿ ಸುಮಾರು ₹250 ಕೋಟಿ ಭ್ರಷ್ಟಾಚಾರವಾಗಿದೆ. ಗಮನಕ್ಕೆ ಬಾರದ ಅನೇಕ ಖಾತೆಗಳಿಗೆ ಹಣ ಹೋಗಿವೆ. ಕೂಡಲೇ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಮುಖಂಡರಾದ ಅಜೀಜ್ ಜಾಗೀರದಾರ್, ಸೈಯದ್ ಅಬ್ಬಾಸ್ ಅಲಿ, ಗಿರಿಲಿಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.
