ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ರಾಜಕೀಯ ಲಾಭ ಪಡೆದು ಘೋರ ಅನ್ಯಾಯ ಮಾಡಲು ಹೊರಟಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ಎಂ ವಿರೂಪಾಕ್ಷಿ ಆರೋಪಿಸಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಉಪಸಮಿತಿ ಮಾಧುಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ವರದಿಯನ್ನು ಅಂಗೀಕರಿಸದೆ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಮಾತ್ರ ಶಿಫಾರಸು ಮಾಡಿದೆ. ಆದರೆ ಈಗಾಗಲೇ ಸುಪ್ರಿಂಕೋರ್ಟಿನಲ್ಲಿ ಏಳು ನ್ಯಾಯಾಧೀಶರ ಪೀಠ ರಚಿಸಲಾಗಿದೆ. ಇದೇ ತಿಂಗಳಲ್ಲಿ ವಿಚಾರಣೆ ಪ್ರಾರಂಭವಾಗಲಿದೆ. ಕಾನೂನಾತ್ಮಕ ಸಮಸ್ಯೆಗಳು ಗೊತ್ತಿದ್ದರೂ, ನೆಪ ಮಾತ್ರಕ್ಕೆ ಶಿಫಾರಸು ಮಾಡಿದೆ” ಎಂದರು.
“2008ರಲ್ಲಿಯೇ ನ್ಯಾಯಮೂರ್ತಿ ಉಷಾ ಮೆಹರ್ ವರದಿಯಂತೆ 341 ತಿದ್ದುಪಡಿಗೆ ಶಿಫಾರಸು ಮಾಡಿದೆ. ಆದರೂ ರಾಜ್ಯ ಸರ್ಕಾರ ಮತ್ತೊಮ್ಮೆ ತಿದ್ದುಪಡಿ ಶಿಫಾರಸು ಮಾಡಿ ಗೊಂದಲ ಸೃಷ್ಟಿಸಲು ಹೊರಟಿದೆ. ಈ ಹಿಂದೆ ಬಾದಾಯಲ್ಲಿ ʼನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದೆ. ಅದಕ್ಕಾಗಿ ಜಾರಿಗೊಳಿಸಿಲ್ಲʼವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದರು. ಕೇಂದ್ರ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಆತಂಕದಿಂದ ಚರ್ಚೆ ಮಾಡದೇ ಕೇಂದ್ರಕ್ಕೆ ಶಿಫಾರಸು ಮಾಡಿರುವುದಾಗಿ ಹೇಳುತ್ತಿದೆ. ಭೋವಿ, ಬಂಜಾರ, ಕೊರವ, ಕೊರಚ ಸಮೂದಾಯಗಳನ್ನು ಹಾಗೇ ಉಳಿಸಿಕೊಂಡು ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಹೇಳುತ್ತಿದೆ” ಎಂದರು.
“ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ವರದಿಯಂತೆ ಶೇ.17 ರಷ್ಟು ಎಸ್‌ಸಿ ಹಾಗೂ ಶೇ.7 ರಷ್ಟು ಎಸ್‌ಟಿಗಳಿಗೆ ಮೀಸಲಾತಿ ಒದಗಿಸಲು ಶಿಫಾರಸು ಮಾಡಿದೆ. ಆದರೆ ರಾಜ್ಯದ ಸರ್ಕಾರ ಸಚಿವ ಸಂಪುಟದಲ್ಲಿ 341 ತಿದ್ದುಪಡಿ ಮಾಡಲು ಶಿಫಾರಸು ಎಂದಷ್ಟೇ ಹೇಳುತ್ತಿದೆ. ಸಮೂದಾಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕೆಲ ಸಮಾಜ ಮುಖಂಡರುಗಳ ಕಾಂಗ್ರೆಸ್ ಗೊಂದಲ ಒಳಮರ್ಮ ಅರಿಯಬೇಕಿದೆ. ಚರ್ಚೆಗೆ ಬಂದರೆ ಚರ್ಚಿಸಲು ಸಿದ್ದ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಪರಿಶಿಷ್ಟರ ಮೇಲೆ ನಿಲ್ಲದ ಶೋಷಣೆ; ವರ್ಷದಲ್ಲಿ 461 ದೌರ್ಜನ್ಯ ಪ್ರಕರಣಗಳು ದಾಖಲು
ಈ ಸಂದರ್ಬದಲ್ಲಿ ರವೀಂದ್ರ ಜಲ್ದಾರ, ಸುಭಾಷ ಅಸ್ಕಿಹಾಳ, ಭೀಮಯ್ಯ ಮಂಚಾಲ ,ಶಂಶಾಲ, ಎನ್ ಕೆ ನಾಗರಾಜ, ಆರ್ ಅಂಜಿನೇಯ, ಚಂದ್ರು ಭಂಡಾರಿ, ರಾಘವೇಂದ್ರ ಬೋರೆಡ್ಡಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ