ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ 2009ರಲ್ಲಿ ಬಿದ್ದ ಭಾರೀ ಮಳೆಯಿಂದ ನೆರೆಹಾವಳಿಗೆ ತುತ್ತಾದ ನೆರೆ ಸಂತ್ರಸ್ಥ ಅರ್ಹ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಯಿಂದ ರಾಯಚೂರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
“ಹೇರುಂಡಿ ಗ್ರಾಮದ ಜನರು ಮನೆ ಮಠಗಳನ್ನು ಕಳೆದುಕೊಂಡರು. ನಂತರ ಸರ್ಕಾರದಿಂದ ಸರ್ವೇ ಮಾಡಿ ಗುರುತಿಸಲಾದ ಫಲಾನುಭವಿಗಳಿಗೆ ಈವರೆಗೂ ಮನೆಗಳ ಹಕ್ಕುಪತ್ರ ನೀಡಿಲ್ಲ. ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿ, ಒಂದೊಂದು ಕುಟುಂಬಕ್ಕೆ ಮೂರ್ನಾಲ್ಕು ಮನೆಗಳನ್ನು ಹಂಚಿಕೆ ಮಾಡಿದ್ದಾರೆ” ಎಂದು ಅಪಾದಿಸಿದರು.
“ಕಳೆದ 15 ವರ್ಷಗಳಿಂದ ಸರ್ಕಾರ ಕೊಟ್ಟ ಮನೆಗಳಲ್ಲಿ ಫಲಾನುಭವಿಗಳು ವಾಸಿಸುತ್ತಿದ್ದು, ತಹಶೀಲ್ದಾರರು ಮನೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ” ಎಂದು ಆರೋಪಿಸಿದರು.
“ಕರಡಿಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೇರುಂಡಿ ಗ್ರಾಮದಲ್ಲಿ ಮನೆ ಹಂಚಿಕೆ ಮಾಡಬೇಕಾದರೆ ಗ್ರಾಮಸಭೆ ಕರೆಯದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಅಧ್ಯಕ್ಷರು, ತಹಶೀಲ್ದಾರರ ಸಮ್ಮುಖದಲ್ಲಿ ಸಭೆ ಕರೆದು ಹಕ್ಕುಪತ್ರ ನೀಡಬೇಕು. ಆದರೆ ಪ್ರಬಲ ಶಕ್ತಿಗಳಿಂದ ಮನೆ ಇದ್ದಂಥವರಿಗೆ ಹಕ್ಕುಪತ್ರ ನೀಡಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಪೊಲೀಸರ ಹೆಸರು ಬರೆದಿಟ್ಟು ಬೈಕ್ ಕಳ್ಳತನ ಆರೋಪಿ ಆತ್ಮಹತ್ಯೆ
“ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರು, ದೇವೆಂದ್ರಪ್ಪ, ಬಸನಗೌಡ, ಇಸ್ಮಾಯಿಲ್ ಬಸವರಾಜ, ಸುವರ್ಣಮ್ಮ, ಸಿದ್ದಲಿಂಗಮ್ಮ, ಯಲ್ಲಮ್ಮ, ಆದಪ್ಪ, ರಾಮಣ್ಣ, ಬಸವರಾಜ ಸೇರಿದಂತೆ ಇತರರು ಇದ್ದರು.
