ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಸೇರಿದಂತೆ ಜಿಲ್ಲೆಯಲ್ಲಿನ ಎಲ್ಲಾ ಹೆಚ್ಚುವರಿ ಭೂಮಿ ಪ್ರಕರಣಗಳ ಕುರಿತು ಮರು ವಿಚಾರಣೆ ನಡೆಸುವಂತೆ ಆಗ್ರಹಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಒತ್ತಾಯಿಸಿದೆ. ಲಿಂಗಸುಗೂರಿನ ಹಳೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದೆ.
ಸಿಂಧನೂರು ತಾಲೂಕಿನ ಜವಳಗೇರಾ ನಾಡಗೌಡ ಎಂಬವರು ಅಕ್ರಮವಾಗಿ ವಶಪಡಿಸಿಕೊಂಡಿರುವ 62ಎಕರೆ ಹೆಚ್ಚುವರಿ ಭೂಮಿಯನ್ನು ಕೂಡಲೇ ಭೂಹೀನರಿಗೆ ವಿತರಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಮತ್ತು ಕರ್ನಾಟಕ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ 31ನೇ ದಿನಕ್ಕೆ ಕಾಲಿಟ್ಟಿದೆ.
ಸಿಂಧನೂರು ಸರ್ವೆ ನಂ. 419 ಮತ್ತು ಸುಲ್ತಾನಪೂರ ಸರ್ವೆ ನಂ.186ರಲ್ಲಿರುವ ನಾಡಗೌಡರ ಹೆಚ್ಚುವರಿ ಭೂಮಿಯನ್ನು ಎಲ್ಲಾ ಜಾತಿಯ ಭೂಹಿನರಿಗೆ ಹಂಚಿಕೆ ಮಾಡಬೇಕು. ಸರ್ಕಾರದ ಹೆಚ್ಚುವರಿ ಭೂಮಿಯನ್ನು ಕಬಳಿಸಿ ಸಾಗುವಳಿ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ, ಅಹೋರಾತ್ರಿ ಅನಿರ್ದಾಷ್ಟಾವಧಿ ಧರಣಿ ಕುಳಿತಿದ್ದಾರೆ.
32ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಜಿಲ್ಲೆಯಾದ್ಯಂತ ಇರುವ ಹೆಚ್ಚುವರಿ ಭೂಮಿಯನ್ನು ಫಲಾನುಭವಿಗಳಿಗೆ ವಿತರಿಸಲು ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಬಳಿಕ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ರವಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮುಖಂಡ ಆರ್. ಮಾನಸಯ್ಯ, ಅಮೀರ್ ಅಲಿ, ಆದಿ ನಗನೂರು, ಲಾಲು ಹಟ್ಟಿ ಇನ್ನಿತರರು ಹಾಜರಿದ್ದರು.