ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್ ಎಚ್ ಸಂಖೆ 1ರ ಗ್ರಾಮ ಪಂಚಾಯಿತಿಯ 15ಕ್ಕೂ ಅಧಿಕ ಮಂದಿ ಸದಸ್ಯರು ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಎರಡನೇ ಅವಧಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಎರಡು ಬಣಗಳ ನಡುಗೆ ತೀವ್ರ ಪೈಪೋಟಿ ನಡೆದು ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಬೆಂಬಲಿತರಾಗಿ ಬಿಂಬಿತರಾಗಿರುವ ಎಂ.ರೆಹಮತ್ ಅವರು ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಚುನಾವಣೆ ನಡೆದು ಎರಡ್ಮೂರು ದಿನಗಳಲ್ಲೇ ಸದಸ್ಯರ ಭಿನ್ನಮತ ಉಲ್ಬಣವಾಗಿದ್ದು, ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ ರಾಣಾ ಮಂಡಲ್ ಸೇರಿದಂತೆ ಸದಸ್ಯರುಗಳಾದ ಬಿಪ್ರದಾಸ್ ಸರ್ದಾರ್, ಬ್ರೋಜೇನ್ ಮಂಡಲ್, ಮಿಥಾಲಿ, ಚಂದ್ರಿಮಾ ಸರ್ಕಾರ್, ರೇಣುಕಾ, ಅರ್ಜುನ್ ಗೋಲ್ದಾರ್, ಸಂಧ್ಯಾ ಮಂಡಲ್, ಸಂಧ್ಯಾ ಡಾಲಿ, ಮುಕ್ತಿರಾಣ ಬಿಸ್ವಾಸ್, ಶೃತಿ ಮಾಲಾ, ಸುಕುಮಾರ್ ಬಾಚರ, ಬಸವರಾಜ, ವಾಸುದೇವ್ ರೆಡ್ಡಿ, ಕರಿಯಪ್ಪ ಸೇರಿದಂತೆ ಇನ್ನೂ ಮೂರು ಮಂದಿ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಶಿಕ್ಷಕರ ಕೊರತೆ; ಶಾಲೆ ತೊರೆದು ವಿದ್ಯಾರ್ಥಿಗಳ ಪ್ರತಿಭಟನೆ
ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ ದಾಸ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅವರೂ ಸಹ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಒಟ್ಟು 38 ಮಂದಿ ಸದಸ್ಯ ಬಲದ ಪಂಚಾಯಿತಿಯಲ್ಲಿ 19 ಮಂದಿ ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದರೂ ನಮ್ಮ ವರ್ಗಕ್ಕೆ ಅವಕಾಶ ನೀಡದೇ ಬೇರೆ ವರ್ಗಕ್ಕೆ ಅಧ್ಯಕ್ಷ ಸ್ಥಾನ ಕಲ್ಪಿಸಿರುವ ರಾಜಕೀಯ ಪಕ್ಷಗಳ ಧೋರಣೆಯಿಂದ ನೊಂದು ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಸದಸ್ಯರು ತಿಳಿಸಿದ್ದಾರೆ.