ಬಿಜೆಪಿ ಪಕ್ಷದಿಂದ ರಾಯಚೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮೇಲೆ ಕಾರ್ಯಕರ್ತನೊಬ್ಬ ಹಲ್ಲೆಮಾಡಲು ಯತ್ನಿಸಿದ ಘಟನೆ ನಡೆದಿದೆ.
ಬಿ.ವಿ.ನಾಯಕ ಬೆಂಬಲಿಗರಿಂದ ಘೊಷಣೆ, ಕೂಗಾಟ, ಚೀರಾಟಕ್ಕೆ ಸಭೆ ಸಾಕ್ಷಿಯಾಯಿತು. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ಅಗರವಾಲ್ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಸಭೆಗೆ ಆಗಮಿಸಿದ ಬೆಂಬಲಿಗರು ಬಿ.ವಿ. ನಾಯಕರ ಪರ ಘೋಷಣೆ ಹಾಕಿ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಗೋ ಬ್ಯಾಕ್ ಘೋಷಣೆ ಕೂಗಿದ್ದರಿಂದ ಸಭೆ ಗೊಂದಲಮಾಯವಾಯಿತು. ಕಾರ್ಯಕರ್ತರನ್ನು ಸಮಧಾನ ಪಡಿಸಲು ಸತತ ಪ್ರಯತ್ನ ಮಾಡಲಾಯಿತಾದರೂ ಸಭೆಯಿಂದ ಅಭಿಮಾನಿಗಳು ಹೊರ ನಡೆದರು.
ನಂತರ ಸ್ಥಳಕ್ಕೆ ಮಾಜಿ ಸಂಸದ ಬಿ.ವಿ.ನಾಯಕ ಆಗಮಿಸಿದಾಗ ಪರಸ್ಥಿತಿ ತಿಳಿಯಾಯಿತಾದರೂ ಅನೇಕರು ಸಭೆಯಿಂದ ಹೊರನಡೆದವರು ಮರಳಲಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ಸಮ್ಮುಖದಲ್ಲಿಯೇ ಬಂಡಾಯ ಭುಗಿಲೆದ್ದಿದ್ದು, ಬೆಳಿಗ್ಗೆಯಿಂದ ಪಕ್ಷದ ಅತೃಪ್ತರೊಂದಿಗೆ ಚರ್ಚೆ ನಡೆಸಿದರೂ ಸರಿ ಹೋಗಿಲ್ಲ. ಎಲ್ಲವೂ ಸರಿಹೋಗಿದೆ ಎಂದು ಹೇಳಿಕೊಂಡಿದ್ದ ಉಸ್ತುವಾರಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಅಸಮಾಧಾನ ಬಹಿರಂಗಗೊಂಡಿದೆ. ಕಾರ್ಯಕರ್ತರನ್ನು ಸಮಾಧಾನ ಪಡಿಸಿ, ಪರಸ್ಥಿತಿ ತಿಳಿಗೊಂಡ ನಂತರ ಸಂಘಟನೆ ಸಭೆ ಮುಂದುವರಿಸಿದರು.
