ರಾಯಚೂರು ತಾಲೂಕಿನ ಜೇಗರ್‌ಕಲ್, ಮೀರಾಪೂರ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಹದೆಗಟ್ಟಿದ್ದು, ಇದರಿಂದ ಈ ಮಾರ್ಗಕ್ಕೆ ಬಸ್‌ಗಳು ಸರಿಯಾಗಿ ಬಾರದೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೀರಾಪೂರ ಶಾಲೆ ಮಕ್ಕಳು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರಿಗೆ ಮನವಿ ಸಲ್ಲಿಸಿದರು.
“ಮೀರಾಪುರ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಗ್ರಾಮಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಈ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಈವರೆಗೂ ರಸ್ತೆ ದುರಸ್ತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮಕ್ಕಳು ಹಾಗೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
“ಗ್ರಾಮದ ರಸ್ತೆ ಹದಗೆಟ್ಟಿರುವ ಕಾರಣ ನಿತ್ಯವೂ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇತ್ತೀಚೆಗೆ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಪೂರ್ತಿ ಹದೆಗೆಟ್ಟ ರಸ್ತೆಯಿಂದ ಮಗು ಗರ್ಭದಲ್ಲಿಯೇ ಸಾವನಪ್ಪಿರುವ ಘಟನೆ ನಡೆದಿದೆ. ಟ್ರಾಕ್ಟರ್‌ಗಳು ಜಮೀನುಗಳಿಗೆ ಉರುಳಿ ಬೀಳುತ್ತಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸೂಚನೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ₹6 ಕೋಟಿ ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದಲ್ಲಿ ಹುಳು ಪತ್ತೆ; ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ
“ಗ್ರಾಮಕ್ಕೆ ಶನಿವಾರ ಮತ್ತು ಭಾನುವಾರ ಬಸ್ ಬರುತ್ತಿಲ್ಲ. ಇದರಿಂದ ಶಾಲೆಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದ್ದು, ಬಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ಸೂಚಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕಾಶಪ್ಪ, ನಾಗರಾಜ್, ಭರತ್, ನಿರ್ಮಲಾ, ಮಹಾದೇವಮ್ಮ, ಮಹೇಶ, ಮೇಘನಾ, ಮಹಾಲಕ್ಷ್ಮೀ ಭವಾನಿ, ಅನಿಷಾ, ಅನಿತಾ ಸೇರಿದಂತೆ ಇತರರು ಇದ್ದರು.
