ರಾಯಚೂರು ಜಿಲ್ಲೆಯ ಆನ್ವರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಯ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ, ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಒಂದನೇ ತರಗತಿಯ ವಿದ್ಯಾರ್ಥಿ ಅರುಣ್ ಎಂಬಾತನ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಶಾಲಾ ಕಟ್ಟಡವು ಎರಡು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿತ್ತು ಎಂದು ಪೋಷಕರು ಮಾಹಿತಿ ನೀಡಿದ್ದು, “ಕಳಪೆ ಕಾಮಗಾರಿಯಿಂದಾಗಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿ ಕುಸಿದು ಬಿದ್ದಿದೆ” ಎಂದು ಆರೋಪಿಸಿದ್ದಾರೆ.
ವಿಷಯ ತಿಳಿದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು, “ಈ ಘಟನೆಗೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯವರು ಕಾರಣ. ಎಲ್ಲರ ಮೇಲೆ ಸೂಕ್ತ ಕ್ರಮ ಆಗಬೇಕು. ಗುತ್ತಿಗೆದಾರನ ಲೈಸೆನ್ಸ್ ರದ್ದು ಆಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಿದ್ಯಾರ್ಥಿ ತೆಲೆಗೆ ಪೆಟ್ಟಾಗಿದ್ದು, ಆನ್ವರಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಸಂಬಂಧಪಟ್ಟ ಇಲಾಖೆ ಹಾಗೂ ತಾಲೂಕು ಆಡಳಿತ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಬಿಇಓ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು” ಎಂದು ಎಸ್ಎಫ್ಐ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿಯಲ್ಲಿ ಮುಂದುವರೆದ ಮಳೆಯ ಆರ್ಭಟ: ನೆರೆಯಿಂದಾಗಿ ಮನೆಯಲ್ಲೇ ಸಿಲುಕಿದ್ದ ಹಲವರ ರಕ್ಷಣೆ
ಶಾಲೆಯ ಮುಖ್ಯೋಪಾಧ್ಯಾಯರು ಬಸವರಾಜ ಯಾದವ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಶಾಲೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದು, ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಶಾಲೆಯ ಕೆಲವು ಹಳೆ ಕೊಠಡಿ ಇರುವುದರಿಂದ ಅದನ್ನು ಬಿಟ್ಟು 2021ರಲ್ಲಿ ಎರಡು ಕೋಣೆಗಳು ಹೊಸ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ನಾವು ಮಕ್ಕಳಿಗೆ ಪಾಠ ಮಾಡಲು ಹೊಸ ಕೊಠಡಿಯಲ್ಲಿ ವ್ಯವಸ್ಥೆ ಮಾಡಿದ್ದೆವು. ಅಲ್ಲಿಯೇ ಇಂತಹ ಘಟನೆ ಸಂಭವಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.