ಅಪ್ರಾಪ್ತ ಮಾದಿಗ ಸಮಾಜದ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಎಸಗಿದವರ ಬಂಧಿಸದೆ ಮೃದು ಧೋರಣೆ ತೋರುತ್ತಿರುವುದನ್ನು ಖಂಡಿಸಿ ಸೆ.30 ರಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಯಾದಗಿರಿ ಬಂದ್ ನಡೆಸಲಾಗುತ್ತಿದೆ ಎಂದು ಸಮಿತಿಯ ರಾಯಚೂರು ತಾಲೂಕು ಅಧ್ಯಕ್ಷ ದುಳ್ಳಯ್ಯ ಗುಂಜಹಳ್ಳಿ ಹೇಳಿದರು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಮತ್ತು ಕೊಡೆಕಲ್ ಗ್ರಾಮದಲ್ಲಿ ಕೆಲವು ದಿನ ಹಿಂದೆ ಅತ್ಯಾಚಾರ ಎಸಗಿ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪಿಗಳನ್ನು ಬಂಧಿಸಿಲ್ಲ.ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಹೀಗಾಗಿ ಯಾದಗಿರಿ ಬಂದ್‌ಗೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಜನರ ರಕ್ಷಿಸುವಲ್ಲಿ ವಿಫಲವಾಗಿದೆ. ಘಟನೆ ನಡೆದು 15 ದಿನಗಳ ಕಳೆದರೂ ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತಗಳು ಜನರ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.
ಅನೇಕ ಬಾರಿ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗಮನ ಸೆಳೆದರೂ ಯಾವ ಪ್ರಯೋಜನವಾಗಿಲ್ಲ. ಸಾಮಾಜಿಕ ಬಹಿಷ್ಕಾರವಾದರೂ ಪೊಲೀಸರು ಶಾಂತಿಸಭೆ ಹೊರತುಪಡಿಸಿದರೆ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಾದಗಿರಿ ಬಂದ್ ಗೆ ಬೆಂಬಲಕ್ಕೆ ಸುಮಾರು ಸಂಘಟನೆಗಳು , ಸಂಸ್ಥೆಗಳು , ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ರಂಜಿತ್ ದಂಡೋರ, ರಾಜ್ಯ ಕಾರ್ಯದರ್ಶಿ ಸುರೇಶ ದುಗನೂರು, ಜಕ್ರಪ್ಪ ಹಂಚಿನಾಳ, ಹನುಮಂತ ಜುಲಮಗೇರಾ, ಮಾರುತಿ ಮರ್ಚಟ್ಹಾಳ, ಪ್ರಸಾದ ಗಾಣಧಾಳ, ನರಸಿಂಹ ತಲಮಾರಿ, ಪ್ರಭು ತಲಮಾರಿ ಉಪಸ್ಥಿತರಿದ್ದರು.
