ವಸತಿ ನಿಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಏಳು ತಿಂಗಳ ವೇತನ ಪಾವತಿ ಮಾಡದೇ ಇರುವ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೇಲೆ ಕ್ರಮ ಜರುಗಿಸಿ, ಬಾಕಿ ವೇತನ ಮಂಜೂರಿಗೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
‘ನಗರದ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ ಏಳು ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ. ಇದರಿಂದ ಜೀವನ ನಡೆಸಲು ಕಷ್ಟಕರವಾಗಿದೆ. ದಶಕಗಳಿಂದ ವಸತಿ ನಿಲಯಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ, ವೇತನದ ಕುರಿತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಅವರು ದೂರಿದರು.
ಆರ್.ಆರ್.ಕಾಲೋನಿಯ ಸರ್ಕಾರಿ ಪಿಯು ಬಾಲಕರ ವಸತಿ ನಿಲಯ, ಬಿಜ್ಜನಗೇರಾ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ವಸತಿ ನಿಲಯ, ಸರ್ಕಾರಿ ವೃತ್ತಿಪರ ಬಾಲಕರ ವಸತಿ ನಿಲಯ, ವೃತ್ತಿಪರ ಬಾಲಕಿಯರ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ 180 ಜನಕ್ಕೆ ಕಳೆದ ಏಳು ತಿಂಗಳಿಂದ ವೇತನ ಮಂಜೂರಾಗಿಲ್ಲ.
ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವೇತನವನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಎಸ್. ರಾಜು, ನಗರಸಭೆ ಮಾಜಿ ಸದಸ್ಯ ಮಂಚಾರ ಭೀಮಣ್ಣ, ತಾಯಪ್ಪ ಜೇಗರಕಲ್ ನಾಗಪ್ಪ ಸೇರಿದಂತೆ ಅನೇಕರು ಇದ್ದರು.