ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ 2022-23ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಿಂದ ವರ್ಗಾವಣೆಯಾಗಿರುವ ಶಿಕ್ಷಕರನ್ನು ಬೇರೆ ಖಾಯಂ ಶಿಕ್ಷಕರು ಬರುವವರೆಗೆ ಇಲ್ಲಿಯೆ ಮುಂದುವರೆಸಬೇಕು ಎಂದು ಆಗ್ರಹಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಘೇರಾವ್ ಹಾಕಿದರು.
ರಾಯಚೂರು ನಗರದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಿದ್ದ ವೇಳೆ ಎಸ್‌ಎಫ್‌ಐ ನೇತೃತ್ವದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.
“2022-23 ಸಾಲಿನ ಶಿಕ್ಷಕರ ವರ್ಗಾವಣೆಯಿಂದ ಇಡೀ ಜಿಲ್ಲೆಯ ಶಾಲೆಗಳು ಖಾಲಿಯಾಗಿವೆ. ಈ ಹಿಂದೆ ದೇವದುರ್ಗ ತಾಲೂಕಿನಲ್ಲಿ 48,532 ಸಾವಿರ ಮಂದಿ ಮಕ್ಕಳಿದ್ದು, 373 ಶಿಕ್ಷಕರು, ಮಾನ್ವಿ ತಾಲೂಕಿನಲ್ಲಿ 52,000 ಮಂದಿ ಮಕ್ಕಳಿದ್ದು 351 ಶಿಕ್ಷಕರು, ಸಿಂಧನೂರಿನಿಂದ 401, ಲಿಂಗಸೂಗೂರಿನಿಂದ 380, ರಾಯಚೂರು ತಾಲೂಕಿನಿಂದ 280 ಮಂದಿ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕೆಗೆ ಹಿನ್ನಡೆಯಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಶಿಕ್ಷಕರ ವರ್ಗಾವಣೆಯಿಂದ, ಪ್ರತೀ ತಾಲೂಕಿನಲ್ಲಿ 85ರಿಂದ 100 ಶಾಲೆಗಳು ಶೂನ್ಯ ಶಾಲೆಗಳಾಗಿವೆ. ಹಾಗಾಗಿ ಬೇರೆ ಖಾಯಂ ಶಿಕ್ಷಕರು ಬರುವವರೆಗೆ ಈ ಶಿಕ್ಷಕರನ್ನು ಇಲ್ಲಿಯೇ ಮುಂದುವರೆಸಬೇಕು. ಜಾಲಹಳ್ಳಿಯಲ್ಲಿ ಪ್ರತಿಭಟನೆಯ ಸ್ಥಳಕ್ಕೆ ಬಂದ ಡಿಡಿ ಕಚೇರಿಯಿಂದ ಲಿಖಿತವಾಗಿ ಜಿಲ್ಲಾಧಿಕಾರಿ ಆದೇಶದಂತೆ ಮುಂದಿನ ಆದೇಶದವರೆಗೆ ಶಿಕ್ಷಕರನ್ನು ಬಿಡುಗಡೆ ಮಾಡುವುದಿಲ್ಲವೆಂದು ಬರೆದುಕೊಟ್ಟಿದ್ದಾರೆ” ಎಂದರು.
“ಸಿರವಾರ ತಾಲೂಕಿನಲ್ಲಿ ಹೋರಾಟ ನಡೆದಾಗ ಪ್ರತಿಭಟನಾ ಧರಣಿ ಸ್ಥಳಕ್ಕೆ ಡಿಡಿಪಿಐ ಸುರೇಶ್ ಹುಗ್ಗಿಯವರು ಆಗಮಿಸಿ ಲಿಖಿತವಾಗಿ ಬರೆದುಕೊಟ್ಟ ಬಗ್ಗೆ ನನಗೆ ಸಂಬಂಧ ಇಲ್ಲ. ನಮಗೆ ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆಗೆ ಮೇಲಿಂದ ಒತ್ತಡ ಇದೆ. ಆದ್ದರಿಂದ ಬಿಡುಗಡೆ ಮಾಡುತ್ತೇವೆಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಬಿಡುಗಡೆಗೊಳಿಸಲು ಇವರಿಗೆ ಯಾರ ಆದೇಶ ಇತ್ತು. ಇಲಾಖೆಯ ಯಾವುದೇ ಅದೇಶವಿಲ್ಲದಿದ್ದರೂ ಜಿಲ್ಲೆಯ ಸಂಘಟನೆ ಮತ್ತು ಉಸ್ತುವಾರಿ ಮಂತ್ರಿಗಳ ವಿರೋಧದ ನಡುವೆ ಅದೇಗೆ ರಾತ್ರೋ ರಾತ್ರಿ ಅದೇಶಕ್ಕಿಂತ ಹಿಂದಿನ ದಿನಾಂಕ ನಮೂದಿಸಿ ಬಿಡುಗಡೆಗೊಳಿಸಿದರು” ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ತೀವ್ರವಾಗಿ ಖಂಡಿಸಿದರು.
“ಪ್ರತಿಭಟನೆಗೆ ಮಣಿದು ಶಿಕ್ಷಕರ ಬಿಡುಗಡೆಯನ್ನು ನಿಲ್ಲಿಸಲು ಆದೇಶಿಸಿದ ಕ್ರಮ ಸ್ವಾಗತಾರ್ಹ. ಹಾಗೆಯೇ ಮಾರ್ಚ್ ತಿಂಗಳವರೆಗೂ ಬಿಡುಗಡೆ ಆಗದಂತೆ ಕ್ರಮ ವಹಿಸಬೇಕು. ಡಿಡಿಪಿಐ ಸುರೇಶ್ ಹುಗ್ಗಿ, ದೇವದುರ್ಗದ ಬಿಇಒ ಸುಖದೇವ, ಸಿರವಾರದ ಸ್ಥಳವೊಂದರಲ್ಲಿ ಕುಳಿತು ಚಾಲನಾ ಆದೇಶಗಳಿಗೆ ಸಹಿ ಮಾಡಿದರೆ, ಮಾನ್ವಿಯ ಬಿಇಒ ಚಂದ್ರಶೇಖರ್ ಹಣ ವಸೂಲಿ ಮಾಡಿ ಆಫೀಸ್‌ನ ಹೊರಗಿನ ಸ್ಥಳದಲ್ಲಿ ಕುಳಿತು ಆರ್ಡರ್ ನೀಡಿದ್ದಾರೆ” ಎಂದು ಆರೋಪಿಸಿದರು
“ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದು ಅವರು ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದಾರೆ. ಆದರೂ ಈ ಅಧಿಕಾರಿಗಳು ಸಚಿವರು ಹೇಳುವ ಹಿಂದಿನ ದಿನಾಂಕ ನಮೂದಿಸಿ ಚಾಲನಾ ಆದೇಶಗಳನ್ಮು ನೀಡಿ ಸರ್ಕಾರಕ್ಕೆ ಮತ್ತು ಮಕ್ಕಳಿಗೆ ವಂಚನೆ ಮಾಡಿದ್ದಾರೆ. ಆದ್ದರಿಂದ ಕೂಡಲೇ ಡಿಡಿಪಿಐ ಸುರೇಶ್ ಹುಗ್ಗಿ ಮತ್ತು ದೇವದುರ್ಗ, ಮಾನ್ವಿ ಬಿಇಒ ಎವರನ್ನು ಸೇವೆಯಿಂದ ಅಮಾನತು ಮಾಡಬೇಕು. ಈ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ವರ್ಷ ಮುಗಿಯುವವರೆಗೂ ಇಲ್ಲಿಯೇ ಉಳಿಸಬೇಕು. ಹಾಗೂ ಕಿರಿಯ, ಹಿರಿಯ, ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಎಲ್ಲ ಖಾಯಂ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕು” ಎಂದು ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿ ಪರವಾಗಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಕ್ಷಕರ ವರ್ಗಾವಣೆ ಸಮಸ್ಯೆ; ಆತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಸಚಿವ ಭರವಸೆ
2023-24ರ ಶೈಕ್ಷಣಿಕ ವರ್ಷದ ವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದು. ಬಿಡುಗಡೆಗೊಂಡ ಶಿಕ್ಷಕರನ್ನು ವಾಪಸ್ ಕರೆಸಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ʼಶಿಕ್ಷಕರ ನೇಮಕಾತಿ ಕುರಿತು ಸಭೆಯಲ್ಲಿ ಹೇಳಿದ್ದನ್ನು ಕೇಳಿಸಿಕೊಳ್ಳಲಿಲ್ವಾʼ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಘಟನಾಕಾರರ ವಿರುದ್ಧ ಗರಂ ಆಗಿದ್ದಾರೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಅಖಂಡ ದೇವದುರ್ಗ ಹೋರಾಟ ಸಮಿತಿ, ಪ್ರಗತಿಪರ ಹೋರಾಟಗಾರು, ಸಿರಾವಾರ ಡಿವೈಎಫ್ಐ ಮುಖಂಡರು, ಕೆಪಿಆರ್‌ಎಸ್ ಮುಖಂಡರು, ಸಾಮಾಜಿಕ ಹೋರಾಟಗಾರರು, ಸಿರವಾರ ಕರವೇ ಅಧ್ಯಕ್ಷರು ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಇದ್ದರು.