ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಕ್ಲಸ್ಟರ್ ವ್ಯಾಪ್ತಿಯ ನಡುಗಡ್ಡೆ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಶಿವರಾಜ್ ಎಂಬಾತನನ್ನು ಅಮಾನತು ಮಾಡುವಂತೆ ಎಸ್ಎಫ್ಐ ಜಿಲ್ಲಾ ಸಮಿತಿ ಮುಖಂಡರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಭಾರಿ ಮುಖ್ಯ ಶಿಕ್ಷಕ ಶಿವರಾಜ್ ನಿರಂತರವಾಗಿ ಶಾಲೆಗೆ ಅನಧಿಕೃತ ಗೈರಾಗುತ್ತಿದ್ದಾರೆ. ಕಳೆದ ಶುಕ್ರವಾರ(ಜೂ 30), ಶನಿವಾರ(ಜು 01)ವೂ ಗೈರಾಗಿದ್ದಾರೆ. ಯಾವುದೇ ಸಿಎಲ್ ಇಲ್ಲದೆ, ಬಿಇಒ ಅನುಮತಿ ಇಲ್ಲದೆ ರಜೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸೋಮವಾರದಂದು 2 ಗಂಟೆ ತಡವಾಗಿ ಶಾಲೆಗೆ ಬಂದಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರಿ ಸಂಬಳ ತಿಂದು ಶಾಲೆಗೆ ಗೈರಾಗುವ ಮೂಲಕ ಮಕ್ಕಳಿಗೆ ಮತ್ತು ಶಾಲೆಗೆ ದ್ರೋಹವೆಸಗಿದ್ದಾರೆ. ಹಾಗಾಗಿ ಈತನನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
“ಪ್ರಭಾರಿ ಮುಖ್ಯ ಶಿಕ್ಷಕ ಶಿವರಾಜ್ ಈ ಹಿಂದಿನಿಂದಲೂ ಶಿಕ್ಷಣ ಇಲಾಖೆಯ ಮತ್ತು ಸ್ಥಳೀಯ ಪಾಲಕ ಪೋಷಕರ ಯಾವುದೇ ಭಯವಿಲ್ಲದೆ ಶಾಲೆಗೆ ಅನಧಿಕೃತವಾಗಿ ಗೈರಾಗುತ್ತಾ ನಿರ್ಭಯವಾಗಿ ತಿರುಗಾಡುತ್ತಿರುತ್ತಾರೆ. ಈ ಕುರಿತು ಗ್ರಾಮಸ್ಥರು ಎಷ್ಟೋ ಬಾರಿ ಶಾಲೆಗೆ ಹೋಗಿ ಗಲಾಟೆ ಮಾಡಿ ಬೈದು ಬುದ್ದಿ ಹೇಳಿದರೂ ಶಿಕ್ಷಕ ತಿದ್ದಿಕೊಂಡಿಲ್ಲ” ಎಂದು ಆರೋಪಿಸಿದರು.
“ಈ ಶಾಲೆ ಏಕೋಪಾಧ್ಯಾಯ ಶಾಲೆಯಾಗಿದ್ದು, ಒಬ್ಬರು ಅತಿಥಿ ಶಿಕ್ಷಕ ಮಾತ್ರ ಇದ್ದಾರೆ. ಶಾಲೆಯ ಜವಾಬ್ದಾರಿಯನ್ನು ಅತಿಥಿ ಶಿಕ್ಷಕರ ಮೇಲೆ ಹಾಕಿ ಪ್ರಭಾರಿ ಶಿಕ್ಷಕ ಅನಧಿಕೃತವಾಗಿ ಗೈರಾಗುತ್ತಿರುವುದು ಕಂಡುಬಂದಿದೆ. ಗೈರಾದ ಸಂದರ್ಭದಲ್ಲಿ ಎರವಲು ಸೇವೆಗೆ ಶಿಕ್ಷಕರನ್ನು ನೇಮಿಸಿ ಗೈರಾಗಬೇಕೆಂಬ ಯಾವ ನಿಯಮವನ್ನೂ ಈ ಪ್ರಭಾರಿ ಮುಖ್ಯ ಶಿಕ್ಷಕ ಶಿವರಾಜ್ ಪಾಲಿಸಿಲ್ಲ. ಅಲ್ಲದೆ ಈವರೆಗೆ ಯಾವುದೇ ತರಬೇತಿ ಪಡೆಯದ ಅತಿಥಿ ಶಿಕ್ಷಕರಿಂದ ನಲಿ ಕಲಿಗೆ ತರಗತಿ ನಡೆಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಜನವರಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿಯೂ ತನ್ನ ಮದುವೆಯ ಸಲುವಾಗಿ ನಿರಂತರವಾಗಿ ಗೈರಾಗಿ ಕೇವಲ 3 ಸಿಎಲ್ ಹಾಕಿಕೊಂಡು ತನ್ನ ವಿವಾಹ ಮಾಡಿಕೊಂಡಿದಾರೆ. ಈ ಸಂದರ್ಭದಲ್ಲೂ ಎರವಲು ಸೇವೆಗೆ ಶಿಕ್ಷಕರನ್ನು ನೇಮಿಸದೇ ಅತಿಥಿ ಶಿಕ್ಷಕರ ಮೇಲೆಯೇ ಅನಧಿಕೃತವಾಗಿ ಶಾಲೆಯನ್ನು ನಡೆಸಿದ್ದಾರೆ. ಈ ಬಗ್ಗೆ ಸಿಆರ್‌ಪಿ ಮತ್ತು ಬಿಇಒ ಗಮನಕ್ಕೆ ಇದ್ದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳದಿರುವುದು ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮದುವೆಯ ಸಂದರ್ಭದ ನಿರಂತರ ಗೈರಾಗಿ ಸರ್ಕಾರದ ವೇತನ ತಿಂದು ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡಿರುವ ಪ್ರಭಾರಿ ಮುಖ್ಯ ಶಿಕ್ಷಕ ಶಿವರಾಜ್‌ನನ್ನು ಕೂಡಲೇ ಅಮಾನತು ಮಾಡಿ ಅವರ ಮುಂಬಡ್ತಿ, ವೇತನ ಹೆಚ್ಚಳ ಕಡಿತ ಮಾಡಿ ಆದೇಶ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಬಾಬು ಜಗಜೀವನ್‌ರಾಂ ಅವರ 37ನೇ ಪುಣ್ಯಸ್ಮರಣೆ
“ಮಾನ್ವಿ ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಈ ಕುರಿತು ಮೌಖಿಕ ದೂರು ನೀಡಿದ ಮೇಲೆಯೂ ಬಿಇಒ ಶಿಕ್ಷಕನಿಗೆ ನೋಟಿಸ್ ನೀಡುವುದು ಸೇರಿದಂತೆ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲದಿರುವುದು ಖಂಡನೀಯ. ಸರ್ಕಾರದ ಸಂಬಳ ತಿಂದು ಬಡವರ ಮಕ್ಕಳಿಗೆ ದ್ರೋಹ ಎಸಗುವ ಇಂತಹ ಶಿಕ್ಷಕನನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
“ಬೇಜವಾಬ್ದಾರಿ ಶಿಕ್ಷಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮುಂದೆ ಯಾರೂ ಇಂತಹ ಕೃತ್ಯ ಎಸಗದ ರೀತಿಯಲ್ಲಿ ಎಚ್ಚರ ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಡಿಡಿಪಿಐ ಕಚೇರಿ ಮುಂದೆ ಧರಣಿ ನಡೆಸಲಾಗುವುದು” ಎಂದು ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿಯ ಮುಖಂಡರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಸಹ ಕಾರ್ಯದರ್ಶಿ ಚಿದಾನಂದ ಕರಿಗೂಳಿ, ಮುಖಂಡರುಗಳಾದ ಮೌನೇಶ್ ಬಿ, ವಿನಯ್ ಕುಮಾರ್ ಇದ್ದರು.